ಭಾಲ್ಕಿ: ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ನ.25, 26 ರಂದು ನಡೆಯಲಿರುವ 38ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ಶುಕ್ರವಾರ ನಡೆದ 38ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ತಾವು ಸಚಿವರಾದ ಮೇಲೆ ಬಸವಕಲ್ಯಾಣದಲ್ಲಿ ಶರಣರ ಸ್ಮಾರಕ, ಗುಹೆಗಳ ಸಂರಕ್ಷಣೆ ಹಾಗೂ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಅಂದಾಜು 600 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಹಿರಿಯ ಸಾಹಿತಿ ಗೋರಚ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಮಾರ್ಚ್ ಒಳಗೆ ಮುಖ್ಯಮಂತ್ರಿಗಳನ್ನು ಕರೆಸಿ ಕಾಮಗಾರಿಗಳಿಗೆ ಚಾಲನೆ
ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪವಿತ್ರ ಭೂಮಿಯಲ್ಲಿ ಅನುಭವ ಮಂಟಪ ಉತ್ಸವ ನಡೆಯುತ್ತಿರುವುದು ಸಂತಸ ತಂದಿದೆ. 21ನೇ ಶತಮಾನದಲ್ಲಿ ಅನುಭವ ಮಂಟಪ ಅಭಿವೃದ್ಧಿಯಲ್ಲಿ ಡಾ| ಚನ್ನಬಸವ ಪಟ್ಟದ್ದೇವರು, ಭೀಮಣ್ಣ ಖಂಡ್ರೆ ಸೇರಿದಂತೆ ಹಲವರ ಕೊಡುಗೆ ಮಹತ್ವದ್ದಾಗಿದೆ. 37 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಶರಣ ಕಮ್ಮಟದಂತಹ ಕಾರ್ಯಕ್ರಮಗಳಿಂದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ ಎಂದು ಹೇಳಿದರು.
ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ಸವ ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಕಲ್ಯಾಣದ ಅನುಭವ ಮಂಟಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಿದೆ. ಅದರ ಭಾಗವಾಗಿ ನಡೆಯುತ್ತಿರುವ ಶರಣ ಕಮ್ಮಟ, ಅನುಭವ ಮಂಟಪ ಉತ್ಸವಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಅನುಭವ ಮಂಟಪ ಉತ್ಸವ ಗೌರವಾಧ್ಯಕ್ಷ ಜಯರಾಜ ಖಂಡ್ರೆ, ಕಾರ್ಯಾಧ್ಯಕ್ಷ ಶಿವರಾಜ ನರಶೆಟ್ಟೆ, ಪುರಸಭೆ ಅಧ್ಯಕ್ಷ ವಿಶಾಲ ವಿಶ್ವಂಬರ ಪುರಿ, ಹಣಮಂತರಾವ್ ಚವ್ಹಾಣ, ಶಶಿಧರ ಕೋಸಂಬೆ ಇದ್ದರು. ಚಂದ್ರಕಾಂತ ಬಿರಾದಾರ ರೂಪಿಸಿದರು.