ಬೀದರ: ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನ.23 ಮತ್ತು 24ರಂದು ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ 40ನೇ ಶರಣ ಕಮ್ಮಟ-ಅನುಭವ ಮಂಟಪ ಉತ್ಸವ-2019 ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ಗೋಷ್ಠಿ, ಸಂಗೀತೋತ್ಸವ ಮತ್ತು ಪ್ರಶಸ್ತಿ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಉತ್ಸವದಲ್ಲಿ ವಚನ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣದಲ್ಲಿ ಪ್ರಚಾರ ಯಾತ್ರೆ ನಡೆಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದಿಂದ ಬಸವ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ|ಬಸವಲಿಂಗ ಪಟ್ಟದ್ದೇವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಸವಾನಂದ ಶ್ರೀಗೆ ಪಟ್ಟದ್ದೇವರು ಪ್ರಶಸ್ತಿ: 23ರಂದು ಬೆಳಗ್ಗೆ 11ಕ್ಕೆ ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಕೇಂದ್ರ ಕಾನೂನು ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದಾರೆ. ಹಾರಕೂಡದ ಡಾ|ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸುವರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗ್ರಂಥ ಲೋಕಾರ್ಪಣೆ, ಬೃಹತ್ ಕೈಗಾರಿಕೆ ಸಚಿವರು ಪ್ರಶಸ್ತಿ ಪ್ರದಾನ ಹಾಗೂ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದಿನದರ್ಶಿಕೆ ಬಿಡುಗಡೆ ಮಾಡುವರು. ಶಾಸಕ ಬಿ. ನಾರಾಯಣ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ಅನುಭಾವ ಮಂಡಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಜಿಲ್ಲೆಯ ಶಾಸಕರು, ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಮನಗುಂಡಿ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮಿಗಳಿಗೆ ಡಾ| ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮಧ್ಯಾಹ್ನ 3ಕ್ಕೆ ವಚನ ಸಂಗೀತ: ಪರಂಪರೆ ಮತ್ತುಬೆಳವಣಿಗೆ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಖೇಳಗಿಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಶ್ರೀ ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ಮತ್ತು ಬೀದರನ ಅಕ್ಕ ಅನ್ನಪೂರ್ಣ ತಾಯಿ ಅಧ್ಯಕ್ಷತೆ ವಹಿಸುವರು. ಪ್ರೊ|ಸಿದ್ದಣ್ಣ ಲಂಗೋಟಿ ಅನುಭಾವ ನೀಡುವರು. ಖ್ಯಾತ ಕಲಾವಿದರಾದ ಕಲಬುರಗಿಯ ಡಾ| ಹನುಮಣ್ಣ ನಾಯಕ ದೊರೆ, ಡಾ| ಮೃತ್ಯುಂಜಯ ಶೆಟ್ಟರ್, ಡಾ|ಕೃಷ್ಣಮೂರ್ತಿ ಭಟ್ ವಚನ ಸಂಗೀತ ನಡೆಸಿಕೊಡುವರು ಎಂದರು.
ನ.24ರಂದು ಬೆಳಗ್ಗೆ 7:30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರುವುದು. ಡಾ| ಬಸವಲಿಂಗ ಪಟ್ಟದ್ದೇವರು ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಶ್ರೀ ಶಿವಾನಂದ ಸ್ವಾಮಿಗಳು ಅನುಭಾವ ನೀಡುವರು. ಶ್ರೀ ಅಭಿನವ ಷಣ್ಮುಖ ಸ್ವಾಮಿಗಳು, ಶ್ರೀ ಸಿದ್ಧರಾಮೇಶ್ವರ ಪಟ್ಟದ್ದೇವರು, ಶ್ರೀ ಸಚ್ಚಿದಾನಂದ ಸ್ವಾಮಿಗಳು, ಶ್ರೀ ಬಸವರಾಜ ಸ್ವಾಮಿಗಳು, ಶ್ರೀ ನಿಜಗುಣ ಸ್ವಾಮಿಗಳು, ಶ್ರೀ ಗೋಣಿರುದ್ರ ಸ್ವಾಮಿಗಳು, ಶ್ರೀ ಶಿವಪ್ರಸಾದ ಸ್ವಾಮಿಗಳು, ಶ್ರೀ ಬಸವಲಿಂಗ ಸ್ವಾಮಿಗಳು, ಡಾ| ಈಶ್ವರಾನಂದ ಸ್ವಾಮಿಗಳು,ಶ್ರೀ ಅಕ್ಕನಾಗಮ್ಮ ತಾಯಿ, ಶ್ರೀ ಮಾತೆ ಮೈತ್ರಾದೇವಿ ತಾಯಿ, ಶ್ರೀ ಮಹಾದೇವಮ್ಮ ತಾಯಿ, ಶ್ರೀ ಸತ್ಯಕ್ಕ, ಶ್ರೀ ಬಸವರಾಜ ಗುರುಗಳು ಸಮ್ಮುಖ ವಹಿಸುವರು.
ಬೆಳಗ್ಗೆ 9:3ಕ್ಕೆ ವಚನ ಸಂಗೀತ ಸುಧೆ ಹಾಗೂ ಶರಣರ ಸ್ವರವಚನ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಬೇಲೂರಿನ ಶ್ರೀ ಶಿವಕುಮಾರ ಸ್ವಾಮಿಗಳು, ಶ್ರೀ ಪಂಚಾಕ್ಷರಿ ಸ್ವಾಮಿಗಳು, ಶ್ರೀ ಸಂಗಮೇಶ್ವರ ಸ್ವಾಮಿಗಳು ಸಾನ್ನಿಧ್ಯ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಅಧ್ಯಕ್ಷತೆ ವಹಿಸುವರು. ಖ್ಯಾತ ಗಾಯಕರಾದ ಸಂಗೀತಾ ಕಟ್ಟಿ, ಡಾ|ಮುದ್ದುಮೋಹನ್, ವಿಶ್ವರಾಜ ರಾಜಗುರು ವಚನ ಸಂಗೀತ ನಡೆಸಿಕೊಡುವರು. ಸಾಹಿತಿ ಡಾ| ಸೋಮನಾಥ ಯಾಳವಾರ ಅನುಭಾವ ಮಂಡಿಸುವರು.
ಬೆಳಗ್ಗೆ 11:30ಕ್ಕೆ ವಚನ ಕಲ್ಯಾಣ-ತಾತ್ವಿಕ ಚಿಂತನೆ ಹಾಗೂ ಗ್ರಂಥ ಲೋಕಾರ್ಪಣೆ ನಡೆಯಲಿದ್ದು, ಇಳಕಲ್ಲನ ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು ಸಾನ್ನಿಧ್ಯ ಮತ್ತು ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸುವರು. ತೆಲಂಗಾಣಾದ ಸಚಿವ ತಣ್ಣೀರು ಹರೀಶ ರಾವ್, ಜಹೀರಾಬಾದ ಸಂಸದ ಬಿ.ಬಿ. ಪಾಟೀಲ, ಶಾಸಕ ಮಾಣಿಕರಾವ್ ಮತ್ತಿತರರು ಪಾಲ್ಗೊಳ್ಳುವರು.
ಲಾತೂರಿನ ಡಾ|ಭೀಮರಾವ್ ಪಾಟೀಲ ಅನುಭಾವ ನೀಡುವರು. ಖ್ಯಾತ ಅನುವಾದಕ ಪ್ರೊ| ಬಾಲಚಂದ್ರ ಜಯಶೆಟ್ಟಿ ಗ್ರಂಥ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ 2ಕ್ಕೆ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ಶ್ರೀ ಶರಣಬಸವ ಸ್ವಾಮಿಗಳು ನೇತೃತ್ವ ಡಾ|ಅಕ್ಕ ಗಂಗಾಂಬಿಕೆ ತಾಯಿ ಅಧ್ಯಕ್ಷತೆ ವಹಿಸುವರು. ಮೈಸೂರಿನ ಅಕ್ಕಮಹಾದೇವಿ ಸಮ್ಮುಖ ವಹಿಸುವರು. ಜಿಪಂ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಶಾಸಕರಾದ ರಹೀಮ್ ಖಾನ್, ಅಶೋಕ ಖೇಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.