Advertisement

ಆ್ಯಂಟಿಪಾಸ್ಫೋಲಿಪಿಡ್‌ ಆ್ಯಂಟಿಬಾಡಿ ಸಿಂಡ್ರೋಮ್‌

06:00 AM Aug 19, 2018 | |

ಸುಮಾರು ಒಂದು ವರ್ಷದ ಹಿಂದೆ ರೀಟಾ (ಹೆಸರು ಬದಲಾಯಿಸಲಾಗಿದೆ) ಎಂಬ ಸುಶಿಕ್ಷಿತ ಯುವ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಿದ್ದರು. ಆಕೆಯ ಎರಡೂ ಕಾಲುಗಳು ತೀವ್ರ ಸ್ವರೂಪದಲ್ಲಿ ಊದಿಕೊಂಡಿದ್ದವು, ಭಾರೀ ನೋವು ಕೂಡ ಇತ್ತು. ಮೂರು ವಾರಗಳ ಹಿಂದಷ್ಟೇ ಆಕೆ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಪ್ರಸವಿಸಿದ ಮೂರು ದಿನಗಳಲ್ಲಿ ಆಕೆಯ ಎಡಗಾಲು ಊದಿಕೊಂಡಿತ್ತು ಜತೆಗೆ ತೀವ್ರ ತರಹದ ಉಸಿರಾಟ ಸಮಸ್ಯೆಯೂ ಉಂಟಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಯ ಎಡಗಾಲಿನಲ್ಲಿ ಡಿವಿಟಿ (ಕಾಲುಗಳ ರಕ್ತನಾಳದ ಒಳಗೆ ರಕ್ತ ಹೆಪ್ಪುಗಟ್ಟುವ ಆರೋಗ್ಯ ಸಮಸ್ಯೆ) ಮತ್ತು ಕ್ಷಿಪ್ರ ಪಲ್ಮನರಿ ಎಂಬಾಲಿಸಮ್‌ (ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಾಣಾಪಾಯಕಾರಿ ಅನಾರೋಗ್ಯ) ಎಂದು ಪತ್ತೆ ಹಚ್ಚಿದ್ದರು. 

Advertisement

ಕಾಲುಗಳಲ್ಲಿ ಹೆಪ್ಪುಗಟ್ಟಿದ್ದ ರಕ್ತ ಶ್ವಾಸಕೋಶಗಳಿಗೆ ರವಾನೆಯಾಗಿದೆ ಎಂದು ತಿಳಿಯಲಾಗಿತ್ತು. ಎದೆಯ ಸಿಟಿ ಸ್ಕ್ಯಾನ್‌ ಜತೆಗೆ ಹಲವಾರು ರಕ್ತ ಪರೀಕ್ಷೆಗಳಿಗೆ ಒಳಗಾಗಲು ಆಕೆಗೆ ತಿಳಿಸಲಾಗಿತ್ತು. ಪಲ್ಮನರಿ ಎಂಬಾಲಿಸಮ್‌ ಇನ್ನಷ್ಟು ಮುಂದುವರಿಯುವುದನ್ನು ತಡೆಯಲು ಆಕೆಯ ವೆನಾ ಕಾವಾ (ದೇಹದಿಂದ ರಕ್ತವನ್ನು ಹೃದಯಕ್ಕೆ ಒಯ್ಯುವ ರಕ್ತನಾಳ)ದೊಳಕ್ಕೆ ಸೂಕ್ಷ್ಮ ಫಿಲ್ಟರ್‌ ಅಳವಡಿಸುವ ಚಿಕಿತ್ಸೆಗೆ ಆಕೆಯನ್ನು ಒಳಪಡಿಸಲಾಗಿತ್ತು. ರಕ್ತವನ್ನು ತೆಳುಗೊಳಿಸುವ ಔಷಧಗಳ ಸಹಿತ ರೂಢಿಗತ ಗುಣಮಟ್ಟದ ಚಿಕಿತ್ಸೆಗಳನ್ನು ನೀಡಿಯೂ ಆಕೆಯ ಸ್ಥಿತಿ ಉಲ್ಬಣಿಸುತ್ತಲೇ ಇತ್ತು, ಇಂತಹ ಹೊತ್ತಿನಲ್ಲಿ ಆಕೆಯನ್ನು ಚಿಕಿತ್ಸೆಯನ್ನು ನನ್ನ ಬಳಿಗೆ ಕಳುಹಿಸಲಾಗಿತ್ತು. ನಾನು ಆಕೆಯನ್ನು ಪರೀಕ್ಷಿಸುವಾಗ ಆಕೆಯ ಎರಡೂ ಕಾಲುಗಳು ತೊಡೆಯ ತನಕ ಊದಿಕೊಂಡಿದ್ದವು, ತೀವ್ರ ಜ್ವರವಿತ್ತು. ಅತಿಯಾದ ನೋವಿನಿಂದ ಆಕೆಗೆ ನಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರಕ್ತ ಪರೀಕ್ಷೆಯಿಂದ ಕೆಂಪು ರಕ್ತಕಣಗಳು ನಾಶವಾಗುತ್ತಿರುವುದು ತಿಳಿದುಬಂತು. ಆಕೆಯ ಎರಡೂ ಕಾಲುಗಳಲ್ಲಿ ರಕ್ತ ಭಾರೀ ಪ್ರಮಾಣದಲ್ಲಿ ಹೆಪ್ಪುಗಟ್ಟಿತ್ತು. ಆಕೆಯನ್ನು ಲೂಪಸ್‌ ಆ್ಯಂಟಿಕಾಗ್ಯುಲಂಟ್‌ ಎಂಬ ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್‌ ಫ‌ಲಿತಾಂಶ ಲಭಿಸಿತು. ಆಕೆಗೆ ಎಪಿಎಲ್‌ಎ (ಆ್ಯಂಟಿಫಾಸೊ#ಲಿಪಿಡ್‌ ಆ್ಯಂಟಿಬಾಡಿ) ಸಿಂಡ್ರೋಮ್‌ ಉಂಟಾಗಿರುವುದಾಗಿ ನಾವು ನಿರ್ಧರಿಸಿದೆವು. ಆ ಬಳಿಕ ಆಕೆಯನ್ನು ಸ್ಟಿರಾಯ್ಡ ಚಿಕಿತ್ಸೆಗೆ ಒಳಪಡಿಸಲಾಯಿತು, ಆ ಬಳಿಕ ದೀರ್ಘ‌ಕಾಲ ರಕ್ತ ತೆಳುಗೊಳಿಸುವ ಔಷಧಗಳನ್ನು ನೀಡಲಾಯಿತು. ಇದಾಗಿ ಒಂದು ತಿಂಗಳ ಬಳಿಕ ಆಕೆಯ ಸ್ಥಿತಿ ಉತ್ತಮವಾಯಿತು ಮತ್ತು ಆಕೆ ಕೆಲಸಕಾರ್ಯಗಳಲ್ಲಿ ಸ್ವತಂತ್ರರಾಗುವಂತಾಯಿತು. ಒಂದು ವರ್ಷದ ಬಳಿಕ ಆಕೆಯನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿದ್ದ ಹೆಪ್ಪುಗಟ್ಟಿದ ರಕ್ತ ಶಮನವಾಗಿತ್ತು. ಕಿರು ವೆನಾ ಕಾವಾದಲ್ಲಿ ಇದ್ದ ಸಮಸ್ಯೆ ಪೂರ್ಣವಾಗಿ ಪರಿಹಾರವಾಗಿತ್ತು ಮತ್ತು ಅದನ್ನು ಆಜಿಯೋಗಸ್‌ ರಕ್ತನಾಳ ಸ್ಥಳಾಂತರಿಸಿತ್ತು.

ಎಪಿಎಸ್‌ ಒಂದು ಪ್ರತಿಜೀವಕ ರೋಗನಿರೋಧಕ ಕಾಯಿಲೆ
ಪ್ರತಿಜೀವಕಗಳನ್ನು ಉತ್ಪಾದಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಪ್ರತಿಜೀವಕಗಳು ರಕ್ತ ಮತ್ತು ದೇಹದ್ರವಗಳಲ್ಲಿ ಇರುವ ಪ್ರೊಟೀನ್‌ಗಳಾಗಿದ್ದು, ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಬಾಹ್ಯ ಆಕ್ರಮಣಕಾರರಿಗೆ ತಗುಲಿಕೊಂಡು ದೇಹದ ರೋಗ ನಿರೋಧಕ ವ್ಯವಸ್ಥೆಗೆ ಅವುಗಳನ್ನು ನಾಶ ಮಾಡಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ರೋಗ ನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ವಿಫ‌ಲವಾಗುತ್ತದೆ ಹಾಗೂ ದೇಹದ ಆರೋಗ್ಯಯುತ ಮತ್ತು ಸಹಜ ಅಂಗಗಳು ಮತ್ತು ಜೀವಕೋಶಗಳ ವಿರುದ್ಧ ಪ್ರತಿಜೀವಕಗಳನ್ನು ತಯಾರು ಮಾಡುತ್ತದೆ. ಈ ಸ್ವನಾಶಕ ಪ್ರತಿಜೀವಕಗಳನ್ನು ಆಟೊಆ್ಯಂಟಿಬಾಡಿಗಳು ಎಂದು ಕರೆಯುತ್ತಾರೆ. ಎಪಿಎಸ್‌ ರೋಗಿಗಳಲ್ಲಿ ಬಹುತೇಕ ಆಟೊಆ್ಯಂಟಿಬಾಡಿಗಳು ನಿಜವಾಗಿ ಪಾಸೊ#ಲಿಪಿಡ್‌ಗಳಿಗೆ ತಗುಲಿಕೊಂಡಿರುವ ರಕ್ತದ ಪ್ರೊಟೀನ್‌ಗಳನ್ನು ಗುರುತಿಸುತ್ತವೆ ಮತ್ತು ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟುವುದಕ್ಕೆ ಕಾರಣವಾಗುತ್ತವೆ ಎಂಬುದು ಈಗ ತಿಳಿದುಬಂದಿದೆ. 

ಆ್ಯಂಟಿಪಾಸ್ಫೋಲಿಪಿಡ್‌ ಆ್ಯಂಟಿಬಾಡಿ ಸಿಂಡ್ರೋಮ್‌ ಎಂದರೇನು?
ಆ್ಯಂಟಿಪಾಸ್ಫೋಲಿಪಿಡಲ್‌ ಆ್ಯಂಟಿಬಾಡಿ ಸಿಂಡ್ರೋಮ್‌ ಅಥವಾ ಎಪಿಎಸ್‌ ಒಂದು ಪ್ರತಿಜೀವಕ ಜೀವನಿರೋಧಕ (ಆ್ಯಂಟಿ ಇಮ್ಯೂನ್‌) ಆರೋಗ್ಯ ಸಮಸ್ಯೆಯಾಗಿದೆ. ಇದರಲ್ಲಿ ದೇಹವು ರಕ್ತ ಮತ್ತು / ಅಥವಾ ಕೋಶಭಿತ್ತಿಗಳ ಕೆಲವು ಸಹಜ ಅಂಶಗಳನ್ನು ಬಾಹ್ಯ ಅಂಶಗಳು ಎಂದು ತಪ್ಪಾಗಿ ಗುರುತಿಸಿ ಅವುಗಳ ವಿರುದ್ಧ ಪ್ರತಿಜೀವಕಗಳನ್ನು ಉತ್ಪಾದಿಸುತ್ತವೆ. ಇಂತಹ ಪ್ರತಿಜೀವಕಗಳನ್ನು ಹೊಂದಿರುವ ರೋಗಿಗಳು ರಕ್ತ ಹೆಪ್ಪುಗಟ್ಟುವುದು, ಹೃದಯಾಘಾತ ಮತ್ತು ಲಕ್ವಾ ಮತ್ತು ಗರ್ಭಪಾತದಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಎಪಿಎಸ್‌ ಆರೋಗ್ಯ ಸಮಸ್ಯೆಯು ಸಿಸ್ಟೆಮಿಕ್‌ ಲೂಪಸ್‌ ಎರಿಥಮೆಟೋಸ್‌, ಇತರ ಪ್ರತಿಜೀವಕ ರೋಗ ನಿರೋಧಕ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಉಂಟಾಗಬಹುದು; ಆರೋಗ್ಯವಂತರಲ್ಲೂ ಕಾಣಿಸಿಕೊಳ್ಳಬಹುದು.

ಎಪಿಎಸ್‌: ಅಂಕಿಅಂಶ
– ಒಟ್ಟು ಜನಸಂಖ್ಯೆಯಲ್ಲಿ ಶೇ. 1-5ರಷ್ಟು ಮಂದಿ ಎಪಿಎಸ್‌ ಹೊಂದಿರುತ್ತಾರೆ ಎನ್ನಲಾಗಿದೆ.
– ಶ್ವಾಸಕೋಶಕ್ಕೆ ರವಾನೆಯಾಗುವ ರಕ್ತ ಕರಣೆಗಳ (ಪಲ್ಮನರಿ ಎಂಬಾಲಿಸಮ್‌) ಸಹಿತ ದೊಡ್ಡ ರಕ್ತನಾಳಗಳಲ್ಲಿ (ಡೀಪ್‌ ವೈನ್‌ ಥ್ರೊಂಬೊಸಿಸ್‌) ರಕ್ತ ಹೆಪ್ಪುಗಟ್ಟುವುದಕ್ಕೆ ಎಪಿಎಸ್‌ ಕಾರಣವಾಗಿರುತ್ತದೆ.
– ಆಗಾಗ ಗರ್ಭಪಾತಕ್ಕೆ ಒಳಗಾಗುವ ಶೇ. 10ರಿಂದ 25 ಮಂದಿ ಮಹಿಳೆಯರು ಎಪಿಎಸ್‌ ಹೊಂದಿರುತ್ತಾರೆ. 
– ಮಧ್ಯ ವಯಸ್ಸಿನವರಲ್ಲಿ (50 ವರ್ಷ ವಯೋಮಾನಕ್ಕಿಂತ ಕೆಳಗಿನವರು) ಲಕ್ವಾಕ್ಕೆ ಈಡಾಗುವ ಮೂರನೇ ಒಂದರಷ್ಟು ಮಂದಿಗೆ ಎಪಿಎಸ್‌ ಇರುತ್ತದೆ.
– ಎಪಿಎಸ್‌ ಮಹಿಳೆಯರನ್ನು ಬಾಧಿಸುವ ಒಂದು ಮುಖ್ಯ ಅನಾರೋಗ್ಯ: ಎಪಿಎಸ್‌ ಹೊಂದಿರುವ ಶೇ.75ರಿಂದ ಶೇ.90 ಮಂದಿ ಮಹಿಳೆಯರಾಗಿರುತ್ತಾರೆ. 

Advertisement

ಎಪಿಎಸ್‌ ವೈದ್ಯಕೀಯ ಚಹರೆಗಳು
ಆ್ಯಂಟಿಪಾಸೊಲಿಪಿಡ್‌ ಆ್ಯಂಟಿಬಾಡಿ ಹೊಂದಿರುವ ಜನರು ಕೆಳಕಂಡ ಒಂದು ಅಥವಾ ಹೆಚ್ಚು ಲಕ್ಷಣಗಳನ್ನು ಹೊಂದಿರುವ ಅಪಾಯ ಹೆಚ್ಚು:
– ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತ, ವಿಶೇಷವಾಗಿ ಡೀಪ್‌ ವೈನ್‌ ಥ್ರೊಂಬೋಸಿಸ್‌

(ಮುಂದುವರಿಯುತ್ತದೆ)

– ಡಾ| ಪ್ರಶಾಂತ್‌ ಬಿ., 
ಕನ್ಸಲ್ಟಂಟ್‌ ಹೆಮಟಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next