Advertisement

ರೈತ ವಿರೋಧಿ ಬಿಜೆಪಿ ಸರ್ಕಾರ: ನೀಲಾ

01:03 PM Mar 15, 2022 | Team Udayavani |

ಜೇವರ್ಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಣ್ಣಿ, ಕಿವಿ ಹಾಗೂ ಕರಳು ಇಲ್ಲದ ಈ ಉಭಯ ಸರ್ಕಾರಗಳಿಂದ ಜನ ಬೇಸತ್ತು ಹೋಗಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆರೋಪಿಸಿದರು.

Advertisement

ಹರವಾಳ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾಜ್ಯ ಪ್ರಾಂತ ಕೂಲಿಕಾರರ ಸಂಘದ ನೂತನ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ, ಕೂಲಿ ಕಾರ್ಮಿಕರ, ಬಡವರ ಕಷ್ಟಗಳಿಗೆ ನಮ್ಮನ್ನಾಳುತ್ತಿರುವ ರಾಜಕಾರಣಿಗಳು ಕಾರಣ ಹೊರತು ದೇವರಲ್ಲ. ಇದು ಗೊತ್ತಾಗಬಾರದು ಎಂದು ರಾಜಕಾರಣಿಗಳು ಕೆಲವು ವಿಚಾರಗಳು ನಮ್ಮೆಲ್ಲರ ತಲೆಯೊಳಗೆ ತುಂಬುತ್ತಿದ್ದಾರೆ. ಈ ದೇಶದ ಅಭಿವೃದ್ಧಿಗೆ ಅದಾನಿ, ಅಂಬಾನಿ ಕೊಡುಗೆಯಿಲ್ಲ. ರೈತರ ಹಾಗೂ ಕೂಲಿ ಕಾರ್ಮಿಕರ ಕೊಡುಗೆ ಅಪಾರವಿದೆ ಎಂದರು.

ಮಹಿಳಾ ಗ್ರಾಪಂ ಸದಸ್ಯರು ಕಡ್ಡಾಯವಾಗಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕು. ರಸ್ತೆ, ಚರಂಡಿ, ಶುದ್ಧವಾದ ಕುಡಿಯುವ ನೀರು, ಮಹಿಳಾ ಶೌಚಾಲಯ, ಬೀದಿದೀಪ ಅಳವಡಿಸಿ ಮಾದರಿ ಗ್ರಾಪಂ ನಿರ್ಮಾಣವಾಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.

ಕರ್ನಾಟಕ ಪ್ರಾಂತ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ಭೀಮಶಟ್ಟಿ ಯಂಪಳ್ಳಿ ಮಾತನಾಡಿ, ಉದ್ಯೋಗ ಖಾತರಿಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಸಿಗದೇ ಇತ್ತೀಚೆಗೆ ಅದು ಉದ್ರಿ ಖಾತರಿ ಆಗುತ್ತಿದೆ. ಸರ್ಕಾರದ ನೀತಿ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ರೈತರ, ಕೂಲಿಕಾರರ ಸಹಕಾರ ಅಗತ್ಯವಾಗಿದೆ. ಸಮಸ್ಯೆಗಳ ವಿರುದ್ಧ ಸಂಘರ್ಷ ಮಾಡಿ, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಲಹೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಕೂಲಿಕಾರ ಸಂಘದ ಗ್ರಾಮ ಘಟಕದ ನೂತನ ಅಧ್ಯಕ್ಷೆಯಾಗಿ ಜಯಶ್ರೀ ಜವಳಿ, ಗೌರವಾಧ್ಯಕ್ಷರಾಗಿ ಆನಂದಪ್ಪ ಚಿಂಚೋಳಿ, ಕಾರ್ಯದರ್ಶಿಯಾಗಿ ಸಂತೋಷ ಉಮ್ಮರಗಿ, ಖಜಾಂಚಿಯಾಗಿ ಅಬ್ದುಲ್‌ ಮೈನಾಳ, ಸಹ ಕಾರ್ಯದರ್ಶಿಯಾಗಿ ನಾಗರಾಜ ಕಾಳಪ್ಪಗೋಳ ಅವರನ್ನು ಆಯ್ಕೆ ಮಾಡಲಾಯಿತು. ಕೂಲಿಕಾರರ ಸಂಘದ ಮುಖಂಡ ಸಿದ್ಧರಾಮ ಅದ್ವಾನಿ ಹರವಾಳ, ಗ್ರಾಪಂ ಅಧ್ಯಕ್ಷ ಆಕಾಶ ಗಣಜಲಖೇಡ, ಪಿಡಿಒ ಆನಂದ ದೊಡ್ಮನಿ, ಆನಂದಪ್ಪ ಚಿಂಚೋಳಿ, ಕಲ್ಲಪ್ಪ ಅದ್ವಾನಿ, ಸಿದ್ದಪ್ಪ ದೊರೆ, ಗೋಪಾಲ ರಾಠೊಡ, ಕಲ್ಯಾಣಪ್ಪಗೌಡ ನಾಗರಾವತ್‌, ಮಹಿಬೂಬ ಅತ್ತಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next