ಅಫಜಲಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಶಾಸಕ ಎಂ.ವೈ. ಪಾಟೀಲ ವಿರುದ್ಧ ಮಾಡಿರುವ ಆರೋಪ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ ಎಂದು ಮಾಜಿ ಜಿಪಂ ಸದಸ್ಯ ಪ್ರಕಾಶ ಜಮಾದಾರ ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಕೂºಲ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಕುರಿತಾಗಿ ಶಾಸಕರ ವಿರುದ್ಧ ಪದೇ ಪದೇ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರ ಸಂಘಟನೆಯ ಕೊರತೆಯಿಂದ ತಾಲೂಕಿನಿಂದ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಂದಿವೆ ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ತಾಲೂಕಿನಲ್ಲಿ ಎಂ.ವೈ.ಪಾಟೀಲರು ಪಟೇಲರನ್ನು ಒಳಗೊಂಡು ಎಲ್ಲ ಮುಖಂಡರನ್ನು ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸಿದ್ದಾರೆ. ಆದರೂ ಪಟೇಲರು ಈ ರೀತಿಯ ಹೇಳಿಕೆ ನೀಡಿದ್ದು ಅವರ ವ್ಯಕ್ತಿತ್ವಕ್ಕೆ ತಕ್ಕುದ್ದಲ್ಲ ಎಂದರು.
ಜಿ.ಪಂ ಮಾಜಿ ಸದಸ್ಯ ಮತೀನ್ ಪಟೇಲ ಹಾಗೂ ಸಿದ್ದಾರ್ಥ ಬಸರಿಗಿಡ ಮಾತನಾಡಿ ಶಾಸಕ ಎಂ.ವೈ.ಪಾಟೀಲ ಅವರನ್ನು ತಾಲೂಕಿನ ಎಲ್ಲ ವರ್ಗದ ಜನತೆ ಗೌರವದಿಂದ ಕಾಣುತ್ತಾರೆ. ಶಾಸಕರು ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಆಡಳಿತ ಮಾಡಿದ್ದಾರೆ. ಆದರೆ ಮಕ್ಬೂಲ್ ಪಟೇಲ್ ಅವರು ತಾಲೂಕಿನಲ್ಲಿ ಬರೀ ಶಾಸಕರ ಹಿಂಬಾಲಕರದ್ದೇ ಹೆಚ್ಚು ಮಾತು ನಡೆಯುತ್ತದೆ ಎಂದು ಹೇಳಿದ್ದು ಸರಿಯಲ್ಲ. ಇದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದರು.
ತಾಪಂ ಉಪಾಧ್ಯಕ್ಷ ಶಿವಾನಂದ ಗಾಡಿಸಾಹೂಕಾರ, ಪ್ರಧಾನ ಕಾರ್ಯಧರ್ಶಿ ಶರಣು ಕುಂಬಾರ ಮಾತನಾಡಿ, ಮಕ್ಬೂಲ್ ಪಟೇಲರ ಹೇಳಿಕೆಯಿಂದ ಲಿಂಗಾಯತ ಸಮುದಾಯ ಹಾಗೂ ಅಭಿಮಾನಿಗಳಿಗೆ ನೋವುಂಟಾಗಿದೆ. ಈ ಕುರಿತು ಪಕ್ಷದ ವರಿಷ್ಠರಾದ ಡಾ| ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮುಖಂಡರಾದ ರಾಜು ಪಾಟೀಲ, ಮಹಾನಿಂಗ ಅಂಗಡಿ, ಇರ್ಫಾನ್ ಜಮಾದಾರ, ಹಾಜಿ, ನಾನಾಗೌಡ ಪಾಟೀಲ, ಅಂಬರೀಶ ಬುರಲಿ, ರವಿ ನಂದಶೆಟ್ಟಿ, ಗೌತಮ ಸಕ್ಕರಗಿ ಇದ್ದರು.