ಮುಂಬಯಿ: ಕರ್ನಾಟಕದ ಕನ್ನಡ ಪರ ಸಂಘಟನೆಯಾಗಿರುವ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ(ಕರಾವೇ) ಹಿಂದಿ ಹೇರಿಕೆ ವಿರೋಧಿಸಿ ನಡೆಸುತ್ತಿರುವ ಅಭಿಯಾನಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ತನ್ನ ಬೆಂಬಲ ಘೋಷಿಸಿದೆ.
ದೇಶಾದ್ಯಂತ ಹಿಂದಿ ಭಾಷೆಯನ್ನು ಹೇರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರಯತ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದೆ. ಈ ಅಭಿಯಾನದ ಭಾಗವಾಗಿ ವೇದಿಕೆ ಶನಿವಾರದಂದು ಬೆಂಗಳೂರಿನಲ್ಲಿ ಸೆಮಿನಾರ್ ಒಂದನ್ನು ಆಯೋಜಿಸಿದೆ. ಈ ಸೆಮಿನಾರ್‌ನಲ್ಲಿ ಭಾಗವಹಿಸುವಂತೆ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಎಂಎನ್‌ಎಸ್‌ಗೆ ಆಹ್ವಾನ ಕಳುಹಿಸಿಕೊಟ್ಟಿದೆ ಎಂದು ಎಂಎನ್‌ಎಸ್ ನಾಯಕ ಸಂದೀಪ್ ದೇಶಪಾಂಡೆ ತಿಳಿಸಿದರು.
ಅಷ್ಟೇ ಅಲ್ಲದೆ ನಾರಾಯಣ ಗೌಡ ಅವರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ದೂರವಾಣಿ ಕರೆ ಮಾಡಿ ಕೇಂದ್ರ ಸರಕಾರದ ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ಮನವಿ ಮಾಡಿಕೊಂಡರು ಎಂದವರು ತಿಳಿಸಿದರು.
ಮಾತುಕತೆಯ ವೇಳೆ ರಾಜ್ ಠಾಕ್ರೆ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಈ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವ ಭರವಸೆಯನ್ನು ನಾರಾಯಣ ಗೌಡ ಅವರಿಗೆ ನೀಡಿದ್ದಾರೆ. ಬಿಜೆಪಿ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನದಲ್ಲಿದ್ದು ಕೇಂದ್ರದ ಈ ಕ್ರಮದಿಂದಾಗಿ ಮರಾಠಿ ಭಾಷೆಗೆ ಸಾಕಷ್ಟು ಹಿನ್ನಡೆಯುಂಟಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ನಡೆಯಲಿರುವ ಈ ಸೆಮಿನಾರ್‌ನಲ್ಲಿ ಎಂಎನ್‌ಎಸ್‌ನ ಪ್ರತಿನಿಧಿಯಾಗಿ ಸಂದೀಪ್ ದೇಶಪಾಂಡೆ ಪಾಲ್ಗೊಳ್ಳಲಿರುವರು.