ಹೈದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್. ವಿಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪರ-ವಿರೋಧ ಚರ್ಚೆ ಹಾಗೂ ಪರ-ವಿರೋಧ ಮೆರವಣಿಗೆಗಳು ನಡೆಯುತ್ತಿವೆ. ವಿಶೇಷವೆಂದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುವವರು ಮತ್ತು ಸಮರ್ಥಿಸುವವರೂ ಸಹ ತಾವು ನಡೆಸುವ ಮೆರವಣಿಗೆಗಳ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತಿದ್ದಾರೆ.
ಇದೀಗ ಮುಸ್ಲಿಂ ಸಮುದಾಯ ಬಹುಸಂಖ್ಯೆಯಲ್ಲಿರುವ ಹೈದರಾಬಾದ್ ನಲ್ಲಿ ರಾಷ್ಟ್ರಧ್ವಜಕ್ಕೆ ವಿಪರೀತ ಬೇಡಿಕೆ ಬಂದಿದೆ. ಎಲ್ಲಿಯವರೆಗೆ ಎಂದರೆ ರಾಷ್ಟ್ರಧ್ವಜವನ್ನು ತಯಾರಿಸುವವರಿಗೆ ಈ ಬೇಡಿಕೆಯನ್ನು ಪೂರೈಸಲಾಗರಾದಷ್ಟು ಮಟ್ಟಿಗೆ!
ಅಸಾದುದ್ದೀನ್ ಒವೈಸಿ ಅವರ ಎ.ಐ.ಎಂ.ಐ.ಎಂ. ಪಕ್ಷದ ಬಿಗಿ ಹಿಡಿತವಿರುವ ಹೈದರಾಬಾದ್ ನಗರದಲ್ಲಿ ಸಿ.ಎ.ಎ., ಎನ್.ಆರ್.ಸಿ. ಮತ್ತು ಎನ್.ಪಿ.ಆರ್.ಗಳನ್ನು ವಿರೋಧಿಸಿ ಶುಕ್ರವಾರದಂದು ಬೃಹತ್ ತಿರಂಗಾ ಜಾಥಾ ನಡೆಯಲಿದೆ. ಈ ಜಾಥಾಗೆ ಅಗತ್ಯವಿರುವ ರಾಷ್ಟ್ರಧ್ವಜಗಳನ್ನು ತಯಾರಿಸಲು ಧ್ವಜ ತಯಾರಕರು ಹಗಲಿರುಳೂ ಕಾರ್ಯನಿರತರಾಗಿದ್ದಾರೆ.
ನಾಳೆ ನಡೆಯಲಿರುವ ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು 25 ಅಡಿ ಅಗಲದ ಮತ್ತು 12 ಅಡಿ ಉದ್ದವಿರುವ ಈ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಈ ಬೃಹತ್ ಧ್ವಜಕ್ಕೆ ಅಂತಿಮ ರೂಪು ಕೊಡುವ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ.
ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪೌರತ್ವ ವಿಚಾರದ ಮೇಲಿನ ಪರ-ವಿರೋಧ ಮೆರವಣಿಗೆ, ಕಾರ್ಯಕ್ರಮಗಳಿಂದಾಗಿ ದೇಶದಲ್ಲಿ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸುವವರಿಗೆ ಭರ್ಜರಿ ಕೆಲಸ ಲಭಿಸಿರುವುದಂತೂ ಸುಳ್ಳಲ್ಲ!