ಮಂಗಳೂರು: ಬಿಲ್ಲವರ ಕುಲಕಸುಬು, ನಾರಾಯಣಗುರು ನಿಗಮ ಸ್ಥಾಪನೆ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಕೇಂದ್ರ – ರಾಜ್ಯ ಸರಕಾರ ಸ್ಪಂದಿಸದೆ ಇದ್ದರೆ ಮುಂದಿನ ವಿಧಾನಸಭೆ, 2024ರ ಲೋಕಸಭಾ ಚುನಾವಣೆ ಸಮುದಾಯದ ಅಸ್ತಿತ್ವ, ಅಸ್ಮಿತೆಯ ಚುನಾವಣೆಯಾಗಲಿದೆ. ಸಮುದಾಯದ ಶಕ್ತಿಪ್ರದರ್ಶನ ವಾಗಲಿದೆ ಎಂದು ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಡಾ| ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಾಜದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ವಿಧಾನಸೌಧಕ್ಕೆ 41 ದಿನ, 658 ಕಿ.ಮೀ.ಗಳ ಐತಿಹಾಸಿಕ ಪಾದಯಾತ್ರೆಯ ಚಾಲನ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಸರಕಾರ ಈಗಾಗಲೇ ನಿಗಮ ಘೋಷಣೆ ಮಾಡಿರುವ ಮಾಹಿತಿ ದೊರಕಿದೆ. ಆದರೆ ಸಮುದಾಯದ 10 ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ. ಸಮುದಾಯದ ಸ್ವಾಮೀಜಿಗಳು, ನಾಯಕರ ನಡುವೆ ಒಡಕು ತಂದಿಟ್ಟು ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸ ಲಾಗುತ್ತಿದೆ. ನಮ್ಮ ಈ ಹೋರಾಟ ದಲ್ಲಿ ನಾವು ಅನುಭವಿಸುವ ನೋವು, ಸಂಕಟ, ಅವಮಾನಗಳ ಹೊರತಾ ಗಿಯೂ ನಮ್ಮ ಮುಂದಿನ ಮಕ್ಕಳ ಭವಿಷ್ಯ ಅಡಗಿದೆ. ಇದು ನಮ್ಮ ಸಮುದಾಯದ ಭವಿಷ್ಯಕ್ಕಾಗಿ ನಡೆ ಯುತ್ತಿರುವ ಹೋರಾಟ ಎಂದರು.
ಇಚ್ಛಾಶಕ್ತಿ ಇರುವ ಬಿಲ್ಲವ ನಾಯಕರು ವಿಧಾನಸೌಧದಲ್ಲಿ ಇರ ಬೇಕು. ಅಂಥವರನ್ನು ಆರಿಸಿ ಕಳುಹಿಸ ಬೇಕು. ಜನಾರ್ದನ ಪೂಜಾರಿ ಅವರು ಪ್ರಬಲ ರಾಜಕೀಯ ಶಕ್ತಿಯಾಗಿ ಸಮುದಾಯವನ್ನು ಪ್ರತಿನಿಧಿಸಿ ದವರು. ಆದರೆ ಕೆಲವು ಚುನಾವಣೆ ಗಳಲ್ಲಿ ಜನಾರ್ದನ ಪೂಜಾರಿ ಅವರನ್ನು ಬಿಲ್ಲವರು ಸೋಲಿಸಿಲ್ಲ, ಮೇಲ್ವರ್ಗದವರು ಪೂಜಾರಿ ಗೆದ್ದು ಬಾರದಂತೆ ಮಾಡಿದ್ದಾರೆ. ಹಾಗಾಗಿ ಬಿಲ್ಲವರಿಗೆ ಜಾತಿ ಮುಖ್ಯ, ರಾಜಕೀಯ ಅನಂತರವಾಗಬೇಕು ಎಂದರು.
Related Articles
ತೆಲಂಗಾಣ ಸಚಿವ ಶ್ರೀನಿವಾಸ್ ಗೌಡ್ ಮಾತನಾಡಿ, ತೆಲಂಗಾಣದಲ್ಲಿ ಬಿಲ್ಲವರ ಕುಲಕಸುಬಿನ ರಕ್ಷಣೆಯನ್ನು ಸರಕಾರ ಮಾಡಿದೆ. ಅವರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಈಗ ಸಮುದಾಯದ ಬೇಡಿಕೆಗಳಿಗಾಗಿ ನಡೆಯುತ್ತಿರುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದರು.
ಒಬ್ಬ ಶಾಸಕ, ಸಚಿವನಾಗಿ ನನಗೆ ಅಲ್ಲಿ ಬಿಲ್ಲವರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗಿದೆ. ಆದರೆ ಇಲ್ಲಿ 7 ಮಂದಿ ಶಾಸಕರು ಹಾಗೂ ಮೂವರು ಬಿಲ್ಲವ ಸಚಿವರಿದ್ದಾರೆ. ಅವರಿಂದ ಯಾಕೆ ಬಿಲ್ಲವರ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪಾದ ಯಾತ್ರೆಗೆ ಚಾಲನೆ ನೀಡಲಾಯಿತು. ಬಿ. ಜನಾರ್ದನ ಪೂಜಾರಿ ಪಾದಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಕೇರಳ ಶಿವಗಿರಿ ಮಠದ ವಿಷುದಾ ತ್ಮಾನಂದ ಸ್ವಾಮೀಜಿ, ದೊಡ್ಡಬಳ್ಳಾಪುರ ಸರ್ವಧರ್ಮ ಪೀಠದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ಬೆಂಗಳೂರು ಪಿಂಚಾರ ಗುರುಪೀಠದ ಶ್ರೀ ಬಸವ ಶಂಕರಾನಂದ ಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪಾಜಿ, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ಆರ್ಯ ಈಡಿಗ ರಾ. ಮಹಾಮಂಡಳಿ ಮಹಿಳಾ ಅಧ್ಯಕ್ಷೆ ಡಾ| ಅರ್ಚನಾ ಜೈಸ್ವಾಲ್, ವಿ.ಪ. ಸದಸ್ಯ ಹರೀಶ್ ಕುಮಾರ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕೃಷ್ಣ ಮೂರ್ತಿ, ಶಕ್ತಿಪೀಠದ ಕಾರ್ಯದರ್ಶಿ ವೆಂಕಟೇಶ್ ಗುಂಡನೂರು, ಶಕ್ತಿ ಪೀಠದ ಭೂದಾನಿ ಸುರೇಶ್ ಗುತ್ತೇ ದಾರ್, ಜಿ.ಪಂ. ಮಾಜಿ ಸದಸ್ಯ ನಿತಿನ್ ಗುತ್ತೇದಾರ್, ಪಾದಯಾತ್ರೆ ಜಿಲ್ಲಾ ಸಮಿತಿ ಅಧ್ಯಕ್ಷ ಜಿತೇಂದ್ರ ಸುವರ್ಣ, ಪಾದಯಾತ್ರೆ ಮಂಗಳೂರು ತಾ. ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸಮುದಾಯದ ಮುಖಂಡರಾದ ಸತ್ಯಜಿತ್ ಸುರತ್ಕಲ್, ಪದ್ಮರಾಜ್ ಆರ್., ಅನಿಲ್ ಕುಮಾರ್, ಬಾಲರಾಜ್ ಗುತ್ತೇದಾರ್, ಪಿತಾಂಬರ ಹೆರಾಜೆ, ರಕ್ಷಿತ್ ಶಿವರಾಂ, ಸೂರ್ಯಕಾಂತ ಸುವರ್ಣ, ವೀರಭದ್ರ ನಾಯಕ್, ಸಂಜೀವ ಪೂಜಾರಿ ಬೊಳ್ಳಾಯಿ, ರಾಘವೇಂದ್ರ ಅಮೀನ್, ಮಂಜುನಾಥ್ ಬಸವರಾಜ್, ರಾಘವೇಂದ್ರ ಗೌಡ, ಅನಿಲ್ ಕುಮಾರ್, ವೆಂಕಟೇಶ್ ಕಡೆಚ್ಚಾರು, ಮಹಾದೇವ ಗುತ್ತೇದಾರ್, ದಿವಾಕರ ಸನಿಲ್ ಉಪಸ್ಥಿತರಿದ್ದರು.
ಚಿತ್ತರಂಜನ್ ಬೋಳಾರ್, ಅಶೋಕ್ ಪೂಜಾರಿ, ರಾಜೇಶ್ ಬಿ. ಅವರನ್ನು ಅಭಿನಂದಿಸಲಾಯಿತು. ಕವಿತಾ ಸನಿಲ್ ಸ್ವಾಗತಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮತ್ತೊಂದು ಪಾದಯಾತ್ರೆಗೆ ಸಿದ್ಧರಾಗಿ
ಮುಖ್ಯಮಂತ್ರಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಅನುದಾನ ಸೇರಿದಂತೆ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ. ಕಾಟಾಚಾರಕ್ಕೆ ನಿಗಮ ಸ್ಥಾಪಿಸಿ ಸರಿಯಾದ ಯೋಜನೆ ನೀಡದೆ, ಸಮುದಾಯಕ್ಕೆ ಶ್ರಮಿಸದ ವ್ಯಕ್ತಿಗಳಿಗೆ ಅದರ ಜವಾಬ್ದಾರಿ ನೀಡಿದರೆ ಮುಂದಿನ ದಿನಗಳಲ್ಲಿ ಆ ನಿಗಮ ಬಂದ್ ಮಾಡಲು ಮತ್ತೊಂದು ಪಾದಯಾತ್ರೆ ನಡೆಸಲಾಗುವುದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.