Advertisement

ರಾಜ್ಯದಲ್ಲಿನ ಕಾಂಗ್ರೆಸ್‌ ಕೌರ್ಯಕ್ಕೆ ಉತ್ತರಿಸಿ

11:50 AM Feb 25, 2018 | Team Udayavani |

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಯವರು ಶಾಸಕ ಹ್ಯಾರೀಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ನಡೆಸಿದ ಕೌರ್ಯ ಸೇರಿದಂತೆ ಮೂರ್‍ನಾಲ್ಕು ವರ್ಷದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರಿಂದ ನಡೆಸಿರುವ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಪ್ರಸ್ತಾಪಿಸಲಿ ಎಂದು ಸಂಸದೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕರು, ಬೆಂಬಲಿಗರು ದರ್ಪ, ದುರಾಂಹಕಾರದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ನಡೆಯುತ್ತಿರುವ ಗೂಂಡಾವರ್ತನೆ ಬಗ್ಗೆ ಮುಂಬೈ ಕರ್ನಾಟಕ ಭಾಗದ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿಯವರು ಬಾಯಿ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೊಹಮ್ಮದ್‌ ನಲಪಾಡ್‌ ಬಂಧನಕ್ಕೆ ಮುಖ್ಯಮಂತ್ರಿಯವರು ಆದೇಶಿಸಿದ ನಂತರ ಮೂರು ದಿನ ಬೇಕಾಯಿತು. ಎಫ್ಐಆರ್‌ ದಾಖಲಿಸಲು ಪೊಲೀಸ್‌ ಅಧಿಕಾರಿಗಳು ಯೋಚಿಸಬೇಕಾದ ಸ್ಥಿತಿ ನಿರ್ಮಾಣ ಮಾಡಿದ್ದರು. ಮೊಹಮ್ಮದ್‌ ನಲಪಾಡ್‌ ಬಂಧನದ ನಾಟಕವೋ ಅಥವಾ ಮುಖ್ಯಮಂತ್ರಿಗಳ ಮಾತಿಗೆ ಕಿಮ್ಮತ್ತಿಲ್ಲವೋ ಎಂದು ಪ್ರಶ್ನಿಸಿದರು.

ಮೊಹಮ್ಮದ್‌ ನಲಪಾಡ್‌ ಮತ್ತು ಡ್ರಗ್ಸ್‌ ಮಾಫಿಯಾಕ್ಕೆ ಇರುವ ಸಂಬಧದ ಬಗ್ಗೆ ರಾಹುಲ್‌ ಗಾಂಧಿಯವರೇ ಉತ್ತರ ನೀಡಬೇಕು, ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳು ಇದನ್ನು ಬಹಿರಂಗಪಡಿಸಬೇಕು. ಮೊಹಮ್ಮದ್‌ ನಲಪಾಡ್‌ ಕಾನೂನು ಬಾಹಿರವಾಗಿ 7 ಪಿಸ್ತೂಲ್‌ ಇಟ್ಟುಕೊಂಡಿದ್ದರು. ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಯಾರೊಬ್ಬರು 3 ಕ್ಕಿಂತ ಜಾಸ್ತಿ ಪಿಸ್ತೂಲ್‌ ಹೊಂದುವಂತಿಲ್ಲ. ಆದರೂ, ನಲಪಾಡ್‌ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದು ಪ್ರಶ್ನಿಸಿದರು.

ರಾಮಲಿಂಗಾರೆಡ್ಡಿಯವರು ಗೃಹಸಚಿವ ಎನ್ನುವುದನ್ನು ಮರೆತು ವರ್ತಿಸುತ್ತಿದ್ದಾರೆ. ಶಾಸಕ ಹ್ಯಾರೀಸ್‌ರನ್ನು ಕೂರಿಸಿಕೊಂಡು ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸುತ್ತಾರೆ. ಕೆ.ಆರ್‌.ಪುರದಲ್ಲಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನ ಬಂಧನಕ್ಕೆ ನಾಲ್ಕು ದಿನ ಬೇಕಾಯಿತು.

Advertisement

ಯಶವಂತಪುರದಲ್ಲಿ ಕಾಂಗ್ರೆಸ್‌ ಶಾಸಕರ ಬೆಂಬಲಿಗರ ಗೂಂಡಾವರ್ತನೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಇದೇ ಎಂದು ದರ್ಪತೋರಿಸುವವರ ವಿರುದ್ಧ ಎಐಸಿಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್‌ನ “ಮಹಾರಾಜ, ಯುವರಾಜ, ನವರಾಜ’ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next