Advertisement

ತುಂಬೆಯಲ್ಲಿ ಮತ್ತೊಂದು ನೀರು ಶುದ್ದೀಕರಣ ಸ್ಥಾವರ

11:21 AM Jul 28, 2022 | Team Udayavani |

ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನ ನೀರನ್ನು ಶುದ್ಧೀಕರಣಗೊಳಿಸುವ ಉದ್ದೇಶದಿಂದ ತುಂಬೆಯ ರಾಮಲ್‌ಕಟ್ಟೆಯಲ್ಲಿ ಮತ್ತೂಂದು ನೂತನ “ನೀರು ಶುದ್ಧೀಕರಣ ಸ್ಥಾವರ’ ನಿರ್ಮಾಣ ಯೋಜನೆ ಇದೀಗ ಸಾಕಾರ ಹಂತದಲ್ಲಿದೆ.

Advertisement

“ಅಮೃತ್‌ ಯೋಜನೆ’ಯಡಿ ಕೈಗೆತ್ತಿಕೊಳ್ಳಲಾದ ಈ ಯೋಜನೆಯ ಶೇ.80ರಷ್ಟು ಕಾಮಗಾರಿ ಪೂರ್ಣ ಗೊಂಡಿದ್ದು, ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತುಂಬೆ ಡ್ಯಾಂನಿಂದ 1.20 ಕಿ.ಮೀ. ದೂರದ ರಾಮಲ್‌ಕಟ್ಟೆ ಜಂಕ್ಷನ್‌ನಲ್ಲಿ ನೂತನ ಘಟಕ ನಿರ್ಮಿಸಲಾಗುತ್ತಿದೆ.

ರಾಮಲ್‌ಕಟ್ಟೆಯ ಹಾಲಿ 2.25 ಎಂಜಿಡಿ ನೀರಿನ ಸ್ಥಾವರವನ್ನು ಅಮೃತ್‌ ಯೋಜನೆಯಡಿ 20 ಎಂಎಲ್‌ಡಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ 10 ಎಂಎಲ್‌ಡಿ ನೀರನ್ನು ಮಹಾನಗರ ಪಾಲಿಕೆ ಹಾಗೂ 10 ಎಂಎಲ್‌ಡಿ ನೀರನ್ನು ಮುಖ್ಯ ಕೊಳವೆ ಹಾದು ಬರುವ ಗ್ರಾಮ ಪಂಚಾಯತ್‌ ಪ್ರದೇಶಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 1000 ಎಂಎ ಹಾಗೂ 1100 ಎಂಎಂ ಮುಖ್ಯ ಕೊಳವೆಯಲ್ಲಿ ಜೋಡಣೆ ಮಾಡಿರುವ ಎಲ್ಲ ಕೊಳವೆ ಮಾರ್ಗವನ್ನು 20 ಎಂಎಲ್‌ಡಿ ಯೋಜನೆಯ ಕೊಳವೆ ಮಾರ್ಗಕ್ಕೆ ಸ್ಥಳಾಂತರಿಸಲಾಗುತ್ತದೆ.

3ನೇ ಶುದ್ಧೀಕರಣ ಘಟಕ

ತುಂಬೆ ಡ್ಯಾಂನಿಂದ 160 ಎಂಎಲ್‌ಡಿ (ದಾಖಲೆಯ ಪ್ರಕಾರ ಮಾತ್ರ)ನೀರನ್ನು ಪ್ರತೀ ದಿನ ಮಂಗಳೂರಿಗೆ ಪಂಪಿಂಗ್‌ ಮಾಡಲಾಗುತ್ತದೆ. 80 ಎಂಎಲ್‌ಡಿ (2009ರಲ್ಲಿ ನಿರ್ಮಾಣ)ಹಾಗೂ 81.07 1983ರಲ್ಲಿ ನಿರ್ಮಾಣ) ಎಂಎಲ್‌ಡಿಯ 2 ನೀರು ಶುದ್ಧೀಕರಣ (ತುಂಬೆ ಡ್ಯಾಂ ಸಮೀಪ) ಘಟಕಗಳಲ್ಲಿ ನೀರು ಶುದ್ಧೀಕರಣ ಮಾಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಜತೆಯಾಗಿ ಇದೀಗ 20 ಎಂಎಲ್‌ಡಿಯ ಹೊಸ ನೀರು ಶುದ್ಧೀಕರಣ ಘಟಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 10 ಎಂಎಲ್‌ಡಿ ಗ್ರಾಮಾಂತರಕ್ಕೆ ಸರಬರಾಜು ಮಾಡಿದರೆ ಉಳಿದ 10 ಎಂಎಲ್‌ಡಿ ಸೇರಿ 170 ಎಂಎಲ್‌ಡಿ ನೀರು ಲಭಿಸಲಿದೆ.

Advertisement

ಮಂಗಳೂರಿಗೆ ನೀರು ಸರಬರಾಜು ಕೊಳವೆಗಳು

ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ನೀರು ಪೂರೈಕೆಯ ಮೂಲವಾದ ತುಂಬೆಯ ನೇತ್ರಾವತಿ ನದಿಯಿಂದ 1959ರಲ್ಲಿ 2.25 ಎಂ.ಜಿ.ಡಿ (12.27 ಎಂಎಲ್‌ಡಿ) ಮಂಗಳೂರು ನಗರಕ್ಕೆ ನೀರು ಪೂರೈಸುವ ಯೋಜನೆ ಪ್ರಾರಂಭಿಸಿತ್ತು. ಅನಂತರ ಕೆಯುಡಡ್ಲೂಎಸ್‌ ಹಾಗೂ ಒಳಚರಂಡಿ ಮಂಡಳಿಯವರು 1974ರಲ್ಲಿ 18 ಎಂಜಿಡಿ ನೀರು ಪೂರೈಕೆಯ (80 ಎಂ.ಎಲ್‌.ಡಿ)ಯೋಜನೆ ಅನುಷ್ಠಾನಿ ಸಿತ್ತು. ಈ ಯೋಜನೆಯನ್ನು 1997ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. 2007ರಲ್ಲಿ ಕುಡ್ಸೆಂಪ್‌ ನವರು ಎಡಿಬಿ ಸಹಾಯದಿಂದ 80 ಎಂಎಲ್‌ಡಿ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ವ್ಯರ್ಥ ನೀರಿನ ಮರು ಶುದೀಕರಣ

ಸದ್ಯ 2 ಘಟಕದಲ್ಲಿ ಶುದ್ಧೀಕರಣಗೊಳ್ಳದ ಹಾಗೂ ಮಣ್ಣು ಮಿಶ್ರಿತವಾಗಿರುವ ಸುಮಾರು 5-6 ಎಂಎಲ್‌ಡಿಯಷ್ಟು ನೀರು ವ್ಯರ್ಥವಾಗುತ್ತದೆ. ಇಂತಹ ನೀರನ್ನು ಶುದ್ಧೀಕರಣ ಘಟಕದಿಂದ ಹೊರಗೆ ಬಿಡಲಾಗುತ್ತದೆ. ಹೀಗೆ ತೋಡಿನಲ್ಲಿ ಸಾಗುವ ನೀರು ನದಿಗೆ ಸೇರುತ್ತಿದೆ. ಹೀಗಾಗಿ ಹೊಸ ಸ್ಥಾವರದಲ್ಲಿ ನೀರನ್ನು ಮರು ಶುದ್ಧೀಕರಿಸಿ ಬಳಕೆ ಮಾಡುವ ಪರಿಕಲ್ಪನೆಯನ್ನು ಅನುಷ್ಠಾನಿಸಲಾಗಿದೆ. “ಬ್ಯಾಕ್‌ ವಾಷ್‌ ಟ್ರೀಟ್‌ಮೆಂಟ್‌ ಫೆಸಿಲಿಟಿ ಪ್ಲ್ಯಾಂಟ್‌’ ಎಂಬ ಈ ಘಟಕದಲ್ಲಿ ಶುದ್ಧೀಕರಣಗೊಂಡ ಬಳಿಕ ವ್ಯರ್ಥವಾಗುವ ನೀರನ್ನು ಇಲ್ಲಿ ಮರು ಶುದ್ಧೀಕರಿಸಲು ಉದ್ದೇಶಿಸಲಾಗಿದೆ. ಈ ಮೂಲಕ ವ್ಯರ್ಥವಾಗಿ ಹೋಗುವ ನೀರು ಮರುಬಳಕೆ ಸಾಧ್ಯವಾಗಲಿದೆ.

ನಗರ- ಗ್ರಾಮಾಂತರಕ್ಕೆ ಅನುಕೂಲ: ಅಮೃತ್‌ ಯೋಜನೆಯಲ್ಲಿ ತುಂಬೆಯ ರಾಮಲ್‌ ಕಟ್ಟೆಯಲ್ಲಿ ನೀರು ಶುದ್ಧೀಕರಣ ಸ್ಥಾವರ ನಿರ್ಮಾಣ ಯೋಜನೆ ಈಗಾಗಲೇ ಕೊನೆಯ ಹಂತದಲ್ಲಿದೆ. 20 ಎಂಎಲ್‌ಡಿ ನೀರು ಶುದ್ಧೀಕರಣವಾಗಿ ಲಭ್ಯವಾಗುವ ಈ ಯೋಜನೆಯಿಂದ ನಗರ ಹಾಗೂ ಪೈಪ್‌ಲೈನ್‌ ಹಾದುಹೋಗಿರುವ ಗ್ರಾಮಾಂತರ ಭಾಗಕ್ಕೆ ಅನುಕೂಲವಾಗಲಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next