Advertisement

ಮತ್ತೂಂದು ರೈಲು ಅಪಘಾತ: 74ಕ್ಕೂ ಹೆಚ್ಚು ಮಂದಿಗೆ ಗಾಯ

07:45 AM Aug 24, 2017 | |

ಲಕ್ನೋ: ಒಂದರ ಬೆನ್ನಿಗೇ ಮತ್ತೂಂದು ರೈಲು ದುರಂತ ನಡೆದಿದೆ. ಶ್ರಾವಣ ಮಾಸ ಮುಗಿಯುತ್ತಿದ್ದಂತೆ, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಡೆದಿರುವ ಎರಡು ಅಪಘಾತಗಳು ಉತ್ತರ ಪ್ರದೇಶ ಸರಕಾರ ಹಾಗೂ ಜನತೆಯನ್ನು ಕಂಗಾಲಾಗಿಸಿದೆ. ಅಷ್ಟೇ ಅಲ್ಲ, ಈ ಎರಡು ಘಟನೆಯ ಬೆನ್ನಿಗೇ ಸಚಿವ ಸುರೇಶ್‌ ಪ್ರಭು ಅವರು ಘಟನೆಗಳ ಹೊಣೆ ಹೊತ್ತುಕೊಂಡು ರಾಜೀನಾಮೆಗೂ ಮುಂದಾದ ಪ್ರಸಂಗ ನಡೆದಿದೆ.

Advertisement

ಗೋರಖ್‌ಪುರದ ಬಾಬಾ ರಾಘವ್‌ ದಾಸ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತದಿಂದ 80ಕ್ಕೂ ಹೆಚ್ಚು ಮಕ್ಕಳು ಅಸುನೀಗಿರುವ  ಮೂಲಕ ಆರಂಭವಾದ ಅವಘಡಗಳ ಸರಣಿ ಇನ್ನೂ ನಿಂತಿಲ್ಲ. ಆ.19ರಂದು ಸಂಜೆ ಕಳಿಂಗ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ 22 ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಘಟನೆ ಕುರಿತು ಪೂರ್ಣ ಪ್ರಮಾಣದ ತನಿಖೆ ಆರಂಭವಾಗುವ ಮೊದಲೇ ಮತ್ತೂಂದು ರೈಲು ದುರಂತಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಇದರಿಂದಾಗಿ ಕೇಂದ್ರ ರೈಲ್ವೇ ಸಚಿವಾಲಯ ಹಾಗೂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರವನ್ನೂ ನಲುಗಿಸುವಂತೆ ಮಾಡಿದೆ.

ಹೇಗಾಯ್ತು ಘಟನೆ?: ಔರೈಯಾ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಕೈಫೀಯತ್‌ ಎಕ್ಸ್‌ಪ್ರೆಸ್‌ ರೈಲು ಬುಧವಾರ ಬೆಳಗಿನಜಾವ ಡಂಪರ್‌ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ 9 ಬೋಗಿಗಳು ಹಳಿ ತಪ್ಪಿ, ಸುಮಾರು 74 ಪ್ರಯಾಣಿಕರು ಗಾಯಗೊಂಡಿದ್ದಾರೆ. ನಸುಕಿನ 2.50ರ ಸುಮಾರಿಗೆ ಅವಘಡ ಸಂಭವಿಸಿದೆ. ರೈಲ್ವೆ ಇಲಾಖೆಗೆ ಸೇರಿದ, ನಿರ್ಮಾಣ ಸಾಮಗ್ರಿಗಳನ್ನು ಹೊತ್ತೂಯ್ಯುತ್ತಿದ್ದ ಡಂಪರ್‌ ವಾಹನ ರೈಲಿಗೆ ಅಡ್ಡ ಬಂದಿದೆ ಎನ್ನಲಾಗಿದೆ. ಆದರೆ ಡಂಪರ್‌ ವಾಹನ ತನಗೆ ಸೇರಿದ್ದಲ್ಲ ಎಂದಿರುವ ರೈಲ್ವೇ ಇಲಾಖೆ, ಅಪಘಾತದಲ್ಲಿ ಕೇವಲ 25 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆಯಾದರೂ, ಘಟನೆಯಲ್ಲಿ 74 ಮಂದಿ ಗಾಯಗೊಂಡಿರುವುದಾಗಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅರವಿಂದ್‌ ಕುಮಾರ್‌ ಹಾಗೂ ಔರೈಯಾ ಜಿಲ್ಲಾ ಎಸ್‌ಪಿ ಸಂಜೀವ್‌ ತ್ಯಾಗಿ ಸ್ಪಷ್ಟಪಡಿಸಿದ್ದಾರೆ.

ರೈಲು ಅಜಂಘರ್‌ನಿಂದ ದಿಲ್ಲಿಗೆ ಹೊರಟಿತ್ತು. ಪಾಟಾ ಮತ್ತು ಅಚ್ಚಾಲ್ದಾ ರೈಲು ನಿಲ್ದಾಣಗಳ ನಡುವೆ ಹೋಗುವಾಗ ಕ್ರಾಂಸಿಂಗ್‌ ಒಂದರಲ್ಲಿ ಅಡ್ಡ ಬಂದ ಡಂಪರ್‌ ವಾಹನವೊಂದಕ್ಕೆ ರೈಲು ಬಲವಾಗಿ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರ ವಾಗಿದೆ. ಸೈಫೈ ಹಾಗೂ ಇಟವಾ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“”ಅಪಘಾತ ಸಂಭವಿಸಿರುವ ಸ್ಥಳ ಕಾವಲುಗಾರರಿಲ್ಲದ ಕ್ರಾಸಿಂಗ್‌ ಅಲ್ಲ. ಅಲ್ಲಿ ರೈಲು ಹಳಿಗೆ ಅಡ್ಡಲಾಗಿ ರಸ್ತೆಯೊಂದು ಹೋಗಿದ್ದು, ಇದೇ ರಸ್ತೆಯಲ್ಲಿ ಹೊರಟಿದ್ದ ಸರಕು ಸಾಗಣೆ ವಾಹನ ರೈಲಿಗೆ ಅಡ್ಡ ಬಂದಿದ್ದರಿಂದ ಅವಘಡ ಸಂಭವಿಸಿದೆ. ಘಟನೆ ನಡೆದ ಕೂಡಲೇ  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತ ಸ್ಥಳದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ,’ ಎಂದು ಗೃಹ ಕಾರ್ಯದರ್ಶಿ ಭಗವಾನ್‌ ಸ್ವರೂಪ್‌ ಮಾಹಿತಿ ನೀಡಿದ್ದಾರೆ.

Advertisement

ಅಶ್ವನಿ ಲೋಹಾನಿ ಹೊಸ ಅಧ್ಯಕ್ಷ
ಉತ್ಕಲ್‌ ಎಕ್ಸ್‌ಪ್ರೆಸ್‌ ಘಟನೆ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ. ಮಿತ್ತಲ್‌ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಹುದ್ದೆಗೆ ಏರ್‌ ಇಂಡಿಯಾದ ಸಿಎಂಡಿ ಅಶ್ವನಿ ಲೋಹಾನಿ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಪ್ರಧಾನಿಯನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಲೋಹಾನಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ನೇಮಕ ಆದೇಶದ ಪ್ರತಿಯೊಂದನ್ನು ರೈಲ್ವೆ ಸಚಿವಾಲಯಕ್ಕೆ ರವಾನಿಸಿದೆ. ಆ.19ರಂದು ನಡೆದ ರೈಲು ದುರಂತದಲ್ಲಿ 22 ಪ್ರಯಾಣಿಕರು ಮೃತಪಟ್ಟ ಬೆನ್ನಲ್ಲೇ ಕೆಲ ತಿಂಗಳ ಕಾಲ ರಜೆ ಮೇಲೆ ತೆರಳುವಂತೆ ರೈಲ್ವೆ ಸಚಿವಾಲಯ ಮಿತ್ತಲ್‌ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮಿತ್ತಲ್‌ ಅವರು  ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಶ್ವನಿ ಲೋಹಾನಿ ಆರ್‌ಎಸ್‌ಎಂಇ ಕೇಡರ್‌ ಅಧಿಕಾರಿಯಾಗಿದ್ದು, ಹಿಂದೆ ದೆಹಲಿ ವಿಭಾಗದ ಡಿಆರ್‌ಎಂ, ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ ನಿರ್ದೇಶಕರು ಹಾಗೂ ರೈಲ್ವೆ ಪರ್ಯಾಯ ಇಂಧನ ವಿಭಾಗದ ಮುಖ್ಯ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಘಟನೆಗಳ ಹೊಣೆ ಹೊತ್ತ ಸಚಿವ ಸುರೇಶ್‌
ಉತ್ಕಲ್‌ ಎಕ್ಸ್‌ಪ್ರೆಸ್‌ ದುರಂತ ನಡೆದು ನಾಲ್ಕು ದಿನ ಕಳೆಯುವ ಮೊದಲೇ ಮತ್ತೂಂದು ರೈಲು ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಘಟನೆಯ “ಸಂಪೂರ್ಣ ನೈತಿಕ ಹೊಣೆ’ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆ ಕೂಡ ನಡೆದಿದೆ. ಕೈಫೀಯತ್‌ ಎಕ್ಸ್‌ಪ್ರೆಸ್‌ ರೈಲು ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಪ್ರಭು, ರಾಜೀನಾಮೆ “ಮನವಿ’ ಸಲ್ಲಿಸಿದ್ದಾರೆ. “ಈ ಅನಿರೀಕ್ಷಿತ ಅಪಘಾತ, ಅದರಿಂ ದಾದ ಸಾವು, ನೋವುಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ,’ ಎಂದು ಹೇಳಿರುವ ಸಚಿವ ಸುರೇಶ್‌ ಪ್ರಭು, “ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, ಘಟನೆಯ ನೈತಿಕ ಹೊಣೆ ಹೊತ್ತು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸ್ವಲ್ಪ ಕಾಲ ಕಾಯುವಂತೆ ಪ್ರಧಾನಿ ಹೇಳಿದ್ದಾರೆ,’ ಎಂದು ಟ್ವೀಟ್‌ ಮಾಡಿದ್ದಾರೆ. “ಇಲಾಖೆಯಲ್ಲಿ ದಶಕಗಳಿಂದ ಬೇರೂರಿದ್ದ ಅವ್ಯವಸ್ಥೆಗನ್ನು ಹೋಗಲಾಡಿಸಲು ಹಾಗೂ ರೈಲ್ವೆ ಇಲಾಖೆ ಸುಧಾರಣೆಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ “ಬೆವರಿನೊಂದಿಗೆ ರಕ್ತ’ ಕೂಡ ಹರಿಸಿದ್ದೇನೆ,’ ಎಂದು ಪ್ರಭು ಹೇಳಿದ್ದಾರೆ. ಇದೇ ವೇಳೆ ಘಟನೆಯ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಕಾಂಗ್ರೆಸ್‌ ಆಗ್ರಹಿಸಿತ್ತು.

ರೈಲಿನ ಮೇಲೆ ಬಿತ್ತು ಮರದ ಕೊಂಬೆ
ತಿರುವನಂತಪುರ: ಚಲಿಸುತ್ತಿದ್ದ ರೈಲಿನ ಲೋಕೋಮೋಟಿವ್‌ ಮೇಲೆ ಮರದ ಕೊಂಬೆಯೊಂದು ಬಿದ್ದ ಘಟನೆ ಕೊಟ್ಟಾಯಂ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ದೆಹಲಿಯಿಂದ ಚಿಂಗಾ ವನಂಗೆ ತೆರಳುತ್ತಿದ್ದ ರೈಲಿನ ಲೋಕೋಮೋಟಿವ್‌ ಮೇಲೆ ಕೊಂಬೆ ಬಿದ್ದು, “ಪ್ಯಾಂಟಾಗ್ರಫ್’ ಎಂಬ ಸಾಧನಕ್ಕೆ ಹಾನಿಯಾ ಗಿದ್ದು, ತಕ್ಷಣ ಸಾಧನವನ್ನು ಬದಲಿಸಲಾಗಿದೆ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರದ ಮಟ್ಟದಲ್ಲಿ ಉತ್ತರದಾಯಿತ್ವ ಒಂದು ಉತ್ತಮ ವ್ಯವಸ್ಥೆ. ರೈಲ್ವೇ ಸಚಿವ ಸುರೇಶ್‌ ಪ್ರಭು ಅವರ ರಾಜೀನಾಮೆ “ಮನವಿ’ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಅರುಣ್ ಜೇಟ್ಲಿ, 
ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next