Advertisement

ಪುತ್ತೂರಿನಲ್ಲಿ ಮತ್ತೂಂದು ತಾಲೂಕು ಕ್ರೀಡಾಂಗಣಕ್ಕೆ ಚಿಂತನೆ

11:26 PM Dec 14, 2019 | mahesh |

ನಗರ: ಹಾಲಿ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣವನ್ನು ಹಾಗೆಯೇ ಸಾರ್ವಜನಿಕ ಬಳಕೆಗೆ ಉಳಿಸಿಕೊಂಡು ನಗರ ವ್ಯಾಪ್ತಿಯಲ್ಲಿ ಪ್ರತ್ಯೇಕವಾದ ಇಲಾಖಾ ತಾಲೂಕು ಕ್ರೀಡಾಂಗಣವನ್ನು ನಿರ್ಮಿಸಲು ಶಾಸಕರ ನೇತೃತ್ವದಲ್ಲಿ ಚಿಂತನೆ ನಡೆಸಲಾಗಿದೆ.

Advertisement

ಹಾಲಿ ಸಾರ್ವಜನಿಕವಾಗಿ ಬಳಕೆಯಾಗುತ್ತಿರುವ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಕ್ತ ಬಳಕೆ ಸಾಧ್ಯವಾಗುವುದಿಲ್ಲ. ನಗರದ ಹೃದಯಭಾಗದಲ್ಲೇ ಇರುವ ಈ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಹೊರತುಪಡಿಸಿಯೂ ಹಲವು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುತ್ತವೆ. ಪಕ್ಕದ ಹಲವು ವಿದ್ಯಾಸಂಸ್ಥೆಗಳಿಗೂ ಇದೇ ಕ್ರೀಡಾಂಗಣದ ಆವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅದನ್ನು ಸಾರ್ವಜನಿಕ ಬಳಕೆಗೇ ಉಳಿಸಿಕೊಳ್ಳಬೇಕು ಎನ್ನುವ ಇಂಗಿತ ಇದರ ಹಿಂದಿದೆ.

ಕೆಮ್ಮಿಂಜೆಯಲ್ಲಿ ಜಾಗ ಗುರುತು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪ್ರತ್ಯೇಕವಾಗಿ ತಾಲೂಕು ಕ್ರೀಡಾಂಗಣವನ್ನು ನಿರ್ಮಿಸಲು ಕೆಮ್ಮಿಂಜೆ ಬಳಿ 15 ಎಕ್ರೆ ಜಾಗವನ್ನು ಗುರುತಿಸಲಾಗಿದೆ. 5 ಕೋಟಿ ರೂ. ವಿಶೇಷ ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಮತ್ತು ಶೀಘ್ರ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

1991-92ರ ಅನಂತರ ಕೊಂಬೆಟ್ಟು ಡಿಸ್ಟ್ರಿಕ್‌ ಶಾಲಾ ಆವರಣದಲ್ಲಿದ್ದ ಕ್ರೀಡಾಂಗಣ ತಾಲೂಕು ಕ್ರೀಡಾಂಗಣವಾಗಿ ಯುವಜನ ಸೇವಾ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೊಂಡಿತ್ತು. 400 ಮೀ. ಮಣ್ಣಿನ ಟ್ರ್ಯಾಕ್‌ ಇರುವ ಕ್ರೀಡಾಂಗಣದಲ್ಲಿ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟಗಳೂ ನಡೆಯುತ್ತಿವೆ.

ಈ ಹಿಂದಿನ ಸರಕಾರದ ಅವಧಿಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಸೇರಿದ ಕ್ರೀಡಾಂಗಣದ ಅಭಿವೃದ್ಧಿಯ ಬೇಡಿಕೆಯ ಹಿನ್ನೆಲೆಯಲ್ಲಿ ಕ್ರೀಡಾ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಅನುದಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ 14.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ 3 ಕೋಟಿ ರೂ. ಮಂಜೂರಾತಿಗೆ ಸರಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಮೊದಲ ಹಂತದ 3 ಕೋಟಿ ರೂ. ಅನುದಾನದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಕ್ರಿಯಾಯೋಜನೆ ಆಡಳಿತಾತ್ಮಕ ಮಂಜೂರಾತಿಗೆ ಲೋಕೋಪಯೋಗಿ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಹಾಲಿ ಮಂಜೂರಾಗಿರುವ ಅನುದಾನದ ಕೆಲಸಗಳು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುತ್ತವೆಯೇ ಎಂಬ ಕುರಿತು ಇಲಾಖೆ ಅಧಿಕಾರಿಗಳಲ್ಲೂ ಸ್ಪಷ್ಟತೆ ಇಲ್ಲ. ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಕೆಲಸಗಳನ್ನು ನಡೆಸಲು ನಡೆಸಲು ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ.

Advertisement

ಸಂಬಂಧಪಟ್ಟವರ ಜತೆ ಚರ್ಚಿಸಿ ತೀರ್ಮಾನ
ಕೊಂಬೆಟ್ಟು ಕ್ರೀಡಾಂಗಣದಲ್ಲಿ ತಾತ್ಕಾಲಿಕ ದುರಸ್ತಿಗೆ ಬಜೆಟ್‌ ತಯಾರಿಸುವಂತೆ ಹಾಗೂ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನ ಒದಗಿಸುವ ಕುರಿತು ಶಾಸಕರು ಭರವಸೆ ನೀಡಿದ್ದಾರೆ. ಹೊಸ ಕ್ರೀಡಾಂಗಣ ಮತ್ತು ಮುಂದಿನ ಬೆಳವಣಿಗೆಗಳ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ತಾಲೂಕು ಸಹಾಯಕ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಜಯರಾಮ ಗೌಡ ಅವರು ಹೇಳಿದ್ದಾರೆ.

 5 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ
ಕೊಂಬೆಟ್ಟುವಿನಲ್ಲಿ ಸಾರ್ವಜನಿಕ ಬಳಕೆಯ ಕ್ರೀಡಾಂಗಣವಾಗಿರುವುದರಿಂದ ಸಿಂಥೆಟಿಕ್‌ ಟ್ರಾÂಕ್‌ ಮಾಡಿದರೆ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದೂ ಕಷ್ಟವಾಗಬಹುದು. ಪ್ರತ್ಯೇಕ ತಾಲೂಕು ಕ್ರೀಡಾಂಗಣಕ್ಕೆ ಜಾಗ ಗುರುತಿಸಲಾಗಿದೆ. ಇಲಾಖೆಯ ಹೆಸರಿನಲ್ಲಿ ಆರ್‌ಟಿಸಿ ಆದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಸದ್ಯಕ್ಕೆ ಮಂಜೂರಾಗಿರುವ 3 ಕೋಟಿ ರೂ. ಪೆಂಡಿಂಗ್‌ ಇಡಲಾಗಿದೆ. 5 ಕೋಟಿ ರೂ. ವಿಶೇಷ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
 - ಸಂಜೀವ ಮಠಂದೂರು, ಶಾಸಕರು, ಪುತ್ತೂರು

 ಮೊದಲ ಹಂತದ ಹಣ ಮಂಜೂರು
ಹಿಂದಿನ ಸರಕಾರದ ಅವಧಿಯಲ್ಲಿ ನಮ್ಮೆಲ್ಲರ ಪ್ರಯತ್ನದ ಬಳಿಕ ಕೊಂಬೆಟ್ಟು ಕ್ರೀಡಾಂಗಣ ಅಭಿವೃದ್ಧಿಗೆ ಸಲ್ಲಿಸಿದ 14 ಕೋಟಿ ರೂ. ಪ್ರಸ್ತಾವನೆಯಲ್ಲಿ ಪ್ರಥಮ ಹಂತವಾಗಿ 3 ಕೋಟಿ ರೂ. ಮಂಜೂರಾಗಿದೆ. ನಮ್ಮ ಅವಧಿಯಲ್ಲಿ ಮಂಜೂರಾದದ್ದನ್ನು ಅಲ್ಲಿಯೇ ಮಾಡಲಿ. ಹಿಂದೆ ಮಿನಿ ವಿಧಾನಸೌಧದ ವಿಚಾರದಲ್ಲಿಯೂ ಬಿಜೆಪಿಯವರು ಹೀಗೆಯೇ ಮಾಡಿದ್ದರು. ಅವರು ಪ್ರತ್ಯೇಕ ಅನುದಾನ ತಂದು ಅಂತಾರಾಷ್ಟ್ರೀಯ ಕ್ರೀಡಾಂಗಣ ಬೇಕಾದರೆ ಮಾಡಲಿ.
 - ಶಕುಂತಳಾ ಟಿ. ಶೆಟ್ಟಿ, ಮಾಜಿ ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next