ಭುವನೇಶ್ವರ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಾಕಾರ ಸೇರಿದಂತೆ ಇಬ್ಬರು ರಷ್ಯಾ ಪ್ರಜೆಗಳು ಸಾವನ್ನಪ್ಪಿದ್ದ ಬೆನ್ನಲ್ಲೇ ಮಂಗಳವಾರ (ಜನವರಿ 03) ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇದು ಕಳೆದ 15 ದಿನಗಳಲ್ಲಿನ ಮೂರನೇ ಪ್ರಕರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪಂತ್ ಅಪಘಾತವಾದ ರಸ್ತೆಯಲ್ಲಿ ಗುಂಡಿಗಳೇ ಇರಲಿಲ್ಲ..: ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ
ಜಗತ್ ಸಿಂಗ್ ಪುರ್ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ರಷ್ಯಾದ ಮಿಲ್ಯಾಕೋವ್ ಸೆರ್ಗೆ ಎಂಬ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಎಂ ಬಿ ಅಲ್ಡ್ನಾ ಹಡಗಿನ ಮುಖ್ಯ ಇಂಜಿನಿಯರ್ ಆಗಿ ಮಿಲ್ಯಾಕೋವ್ (51ವರ್ಷ) ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಡಗು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ಪ್ರದೇಶದಿಂದ ಪಾರಾದೀಪ್ ಮೂಲಕ ಮುಂಬೈಗೆ ತೆರಳಬೇಕಾಗಿತ್ತು ಎಂದು ವರದಿ ತಿಳಿಸಿದೆ.
ಹಡಗಿನ ಕೋಣೆಯಲ್ಲಿ ಇಂದು ಮುಂಜಾನೆ 4.30ರ ಹೊತ್ತಿಗೆ ಸೆರ್ಗೆ ಶವ ಪತ್ತೆಯಾಗಿತ್ತು. ರಷ್ಯಾ ಪ್ರಜೆಯ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾರಾದೀಪ್ ಬಂದರು ಟ್ರಸ್ಟ್ ಅಧ್ಯಕ್ಷ ಪಿಎಲ್ ಹರಾನಂದ್ ತಿಳಿಸಿದ್ದಾರೆ.
ಒಡಿಶಾದ ರಾಯಗಢದ ಹೋಟೆಲ್ ಒಂದರಲ್ಲಿ ಕಳೆದ ವಾರ ಇಬ್ಬರು ರಷ್ಯನ್ನರು ಮೃತಪಟ್ಟಿದ್ದರು. ಒಟ್ಟಿಗೆ ಬಂದಿದ್ದ ನಾಲ್ವರು ಪ್ರವಾಸಿಗರಲ್ಲಿ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮತ್ತೊಬ್ಬರು ಹೋಟೆಲ್ ಕಿಟಕಿಯಿಂದ ಜಿಗಿದು ಸಾವಿಗೀಡಾಗಿದ್ದರು. ಅವರು ಪುಟಿನ್ ಟೀಕಾಕಾರ ಎಂದು ವರದಿ ತಿಳಿಸಿತ್ತು.