ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿರುವಂತೆಯೇ, ಅದರ ಸಣ್ಣ ಪ್ರಮಾಣದ ರೈಲನ್ನು ಓಡಿಸಲು ಮುಂದಾಗಿದೆ. ಈ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
“ವಂದೇ ಮೆಟ್ರೋ’ ಎಂಬ ಹೆಸರಿನಲ್ಲಿ ಅದನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
2023ರ ಡಿಸೆಂಬರ್ ಅಂತ್ಯದ ಒಳಗಾಗಿ ದೇಶದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ಆಧಾರಿತ ರೈಲು ಸಂಚಾರವಾಗಲಿದೆ. ಅದನ್ನು ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ರೈಲ್ವೇ ಸಚಿವರು ಪ್ರಕಟಿಸಿದ್ದಾರೆ. ಆರಂಭದಲ್ಲಿ ಅದನ್ನು ಹರ್ಯಾಣ ಪಂಚಕುಲದಲ್ಲಿ ಇರುವ ಕಲ್ಕಾ ಮತ್ತು ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಂಥ ಐತಿಹಾಸಿಕ ನಗರಗಳಲ್ಲಿ ಓಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು. ಆ ಸ್ಥಳಗಳಲ್ಲಿ ಪ್ರಯೋಗ ಯಶಸ್ವಿಯಾದ ಬಳಿಕ ದೇಶದ ಇತರ ನಗರ ನಡುವೆ ಸಂಚರಿಸಲು ಅವುಗಳನ್ನು ಬಳಕೆ ಮಾಡಲಾಗುತ್ತದೆ ಎಂದರು.
ಹಲವು ಸ್ಥಳಗಳಲ್ಲಿ:
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಇರುವ ರೈಲ್ವೇ ಕಾರ್ಖಾನೆಯಲ್ಲಿ ಕೂಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ಉತ್ಪಾದಿಸಲಾಗುತ್ತದೆ. ಸದ್ಯ ಚೆನ್ನೈನಲ್ಲಿ ಇರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅದನ್ನು ಹರ್ಯಾಣದಲ್ಲಿ ಇರುವ ಸೋನಿಪತ್, ಮಹಾರಾಷ್ಟ್ರದ ಲಾತೂರ್, ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಇರುವ ರೈಲ್ವೇ ಇಲಾಖೆಯ ಕಾರ್ಖಾನೆಗಳಲ್ಲಿ ಉತ್ಪಾದಿಸಲು ಚಿಂತನೆ ನಡೆಸಲಾಗಿದೆ.
Related Articles
ದೇಶದ ಪ್ರತಿ ನಗರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಸಂಪರ್ಕಿಸಲು ಅವಕಾಶ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೆ. ಅದಕ್ಕೆ ಅನುಸಾರವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನೆರವಾಗಲಿದೆ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೇ ಇಲಾಖೆಗೆ ನೀಡಿದ 2.41 ಲಕ್ಷ ಕೋಟಿ ರೂ. ಮೊತ್ತದಿಂದ ನೆರವಾಗಲಿದೆ. ಇದುವರೆಗೆ ಸೂಕ್ತ ರೀತಿಯ ವಿತ್ತೀಯ ನೆರವು ಇಲ್ಲದ್ದರಿಂದ ಇಲಾಖೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೊಂದರೆಯಾಗಿತ್ತು. 2.41 ಲಕ್ಷ ಕೋಟಿ ರೂ. ಮೊತ್ತದಿಂದಾಗಿ ಪ್ರಯಾಣಿಕರಿಗೆ ಬೇಕಾಗುವ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.
ಬುಲೆಟ್ ಟ್ರೈನ್:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬುಲೆಟ್ ಟ್ರೈನ್ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ ಎಂದು ವೈಷ್ಣವ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವ ಸರ್ಕಾರ ಯೋಜನೆ ಅನುಷ್ಠಾನದಲ್ಲಿ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿರಲಿಲ್ಲ. ಆದರೆ, ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬೇಕಾಗಿರುವ ಸಹಕಾರ ನೀಡುತ್ತಿದೆ ಎಂದು ಅಶ್ವಿನಿ ವೈಷ್ಣವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.