ಅಮೃತಸರ: ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಶನಿವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ. ಇತ್ತೀಚಿನ ದಿನಗಳಲ್ಲಿ ಬಿಎಸ್‌ಎಫ್ ಸಿಬಂದಿ ಹೊಡೆದುರುಳಿಸಿದ ಐದನೇ ಡ್ರೋನ್ ಇದಾಗಿದೆ.
ಮೇ 20 ರಂದು ಅಮೃತಸರದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ. ಅದರ ಹೊರತಾಗಿ, ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕಳೆದ ವಾರ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಅಧಿಕಾರಿಗಳು ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆದು ಅವುಗಳಲ್ಲಿ ಮೂರನ್ನು ಹೊಡೆದುರುಳಿಸಿದ್ದಾರೆ.
ಮೊದಲ ಡ್ರೋನ್ “DJI ಮ್ಯಾಟ್ರಿಸ್ 300 RTK” ತಯಾರಿಕೆಯ ಕಪ್ಪು ಕ್ವಾಡ್ಕಾಪ್ಟರ್ ಆಗಿತ್ತು. ಎರಡನೆಯದು ಕೂಡ ಅದೇ ತಯಾರಿಕೆಯಾಗಿದ್ದು, ಅಮೃತಸರ ಜಿಲ್ಲೆಯ ರತ್ತನ್ ಖುರ್ದ್ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ. ಮೂರನೇ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು ಆದರೆ ಅದು ಪಾಕಿಸ್ತಾನದ ಕಡೆ ಬಿದ್ದಿದೆ.