Advertisement

ಮತ್ತೊಂದು ವಸ್ತು ಪ್ರದರ್ಶನ ಕೇಂದ್ರ ಅನಗತ್ಯ

02:54 PM Apr 15, 2017 | |

ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಬ್ಯಾಂಕ್‌ಗಳ ಸಾಲ ನೀಡಿಕೆ ವ್ಯವಸ್ಥೆ ಸರಳಗೊಂಡಿದ್ದರಿಂದ ಮನೆ ಕಟ್ಟುವವರ ಸಂಖ್ಯೆ ಹೆಚ್ಚುತ್ತಿದ್ದು, ಅವಳಿನಗರ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಅಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನೀಯರ್ ರಾಯ್ಕರ್‌ ಮೈದಾನದಲ್ಲಿ ಆಯೋಜಿಸಿರುವ ಕಾನ್‌ ಮ್ಯಾಟ್‌-2017 ಕಟ್ಟಡ ನಿರ್ಮಾಣ ಉತ್ಪನ್ನಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಮನೆ ಕಟ್ಟುತ್ತಿರುವುದು ಗೊತ್ತಾದರೆ ಬ್ಯಾಂಕ್‌ನವರೇ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿದ್ದಾರೆ. ಇದರಿಂದ ನಗರದಲ್ಲಿ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು. ಅಮರಗೋಳದ ಎಪಿಎಂಸಿ ಆವರಣದಲ್ಲಿರುವ  ವಸ್ತು ಪ್ರದರ್ಶನ ಕೇಂದ್ರವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು.

ಮತ್ತೂಂದು ಕೇಂದ್ರದ ಬೇಡಿಕೆ ಅಗತ್ಯವಿಲ್ಲ. ಕೇಂದ್ರದಲ್ಲಿ ವಸ್ತು ಪ್ರದರ್ಶನ ಆಯೋಜಿಸಿದರೆ ಜನರು ತಾವಾಗಿಯೇ ಬರುತ್ತಾರೆ. ಅದು ಹು-ಧಾ ರಸ್ತೆಯ ಹತ್ತಿರವೇ ಇರುವುದರಿಂದ ಮತ್ತೂಂದು ವಸ್ತು ಪ್ರದರ್ಶನ ಕೇಂದ್ರ ನಿರ್ಮಿಸುವುದು ಕಷ್ಟದ ಸಂಗತಿ ಎಂದು ಹೇಳಿದರು. ವಸ್ತು ಪ್ರದರ್ಶನ ಕೇಂದ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

ಈಗಾಗಲೇ ಸಚಿವ ಆರ್‌.ವಿ. ದೇಶಪಾಂಡೆ ಅವರು ಅಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬೆಂಗಳೂರಿನಲ್ಲಿ ಶೇ. 23ರಷ್ಟು ಕನ್ನಡಿಗರಿದ್ದಾರೆ. ಹುಬ್ಬಳ್ಳಿಯಲ್ಲಿ ಶೇ. 95ರಷ್ಟು ಕನ್ನಡಿಗರಿದ್ದಾರೆ.

ಆದರೂ ರಾಜ್ಯ ಸರ್ಕಾರಗಳು ಬೆಂಗಳೂರನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಸಕ್ತಿ ನೀಡುತ್ತವೆಯೇ ಹೊರತು ಹು-ಧಾ ಅಭಿವೃದ್ಧಿಗೆ ಗಮನ ಹರಿಸದಿರುವುದು ದುರ್ದೈವದ ಸಂಗತಿ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡುತ್ತವೆ ಎಂದರು. 

Advertisement

ಹುಬ್ಬಳ್ಳಿಯವರೇ ಮುಖ್ಯಮಂತ್ರಿಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅವಳಿ ನಗರ ಅಭಿವೃದ್ಧಿಯಾಗಿಲ್ಲ. ನಗರದ ಪ್ರಗತಿ ಕುರಿತು ಅವಲೋಕನ ಅಗತ್ಯ. ಪ್ರತಿ ವರ್ಷ 100 ಕೋಟಿ ರೂ. ಅನುದಾನ ಬರುತ್ತಿದ್ದರೂ ಅದರಿಂದ ಕಣ್ಣಿಗೆ ಕಾಣುವಂಥ  ಯಾವುದೇ ದೊಡ್ಡ ಮಟ್ಟದ ಕಾಮಗಾರಿ ನಡೆದಿಲ್ಲ. 

ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಅದನ್ನು ಬಳಸಿಕೊಳ್ಳುತ್ತಾರೆ ಎಂದು ಹೊರಟ್ಟಿ ಹೇಳಿದರು. ಅಧಿಕಾರಿಗಳಿಗೆ ಹೆದರ್ತಾರೆ: ಬೆಂಗಳೂರಿನಲ್ಲಿ ಐಎಎಸ್‌ ಅಧಿಕಾರಿಗಳು ಹೇಳಿದ್ದೇ ಅಂತಿಮ. ಅವರು ಶಾಸಕರು ಹಾಗೂ ಸಚಿವರ ದೌರ್ಬಲ್ಯಗಳನ್ನಿಟ್ಟುಕೊಂಡು ಹೆದರಿಸಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. 

ಆದರೆ ನನಗೆ ಯಾರ ಮುಲಾಜೂ ಇಲ್ಲ. ಐಎಎಸ್‌ ಅಧಿಕಾರಿಗಳನ್ನು ಹೇಗೆ ನಿಭಾಯಿಸಬೇಕೆಂಬುದು  ತಿಳಿದಿದೆ ಎಂದು ಹೊರಟ್ಟಿ ಹೇಳಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಬಿ. ಮಹೇಶ, ಸುರೇಶ ಕಿರೆಸೂರ, ಅಶೋಕ ಬಸವಾ, ಎನ್‌.ಎಸ್‌ .ನಾಡಗೀರ, ದಿಲೀಪ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next