Advertisement

ಮರಾಠ ಆಂದೋಲನ: 5ನೇ ವ್ಯಕ್ತಿ ಆತ್ಮಹತ್ಯೆ. ಆ.9ರಂದು mega rally

12:27 PM Jul 31, 2018 | udayavani editorial |

ಮುಂಬಯಿ : ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಆಂದೋಲನದ ತಾಜಾ ಬೆಳವಣಿಗೆಯಾಗಿ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ  38ರ ಹರೆಯದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

Advertisement

ಮುಂಬಯಿಯಿಂದ 570 ಕಿ.ಮೀ.ದೂರದ ನಾಂದೇಡ್‌ ಜಿಲ್ಲೆಯ ಧಬಾಡ ಗ್ರಾಮದ ನಿವಾಸಿಯಾಗಿರುವ ಕಚಾರು ಕಲ್ಯಾಣೆ ಎಂಬ ವ್ಯಕ್ತಿ ಕಳೆದ ಜು.29ರಂದು ಮನೆಯವರೆಲ್ಲ ಯಾವುದೋ ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಮನೆಯ ಸೂರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಯಾಣೆ ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಆತ ಬರೆದಿಟ್ಟಿದ್ದ ಎನ್ನಲಾಗಿರುವ ಡೆತ್‌ ನೋಟ್‌ ಪೊಲೀಸರಿಗೆ ಸಿಕ್ಕಿದೆ. ಅದರಲ್ಲಿ ಆತ ತಾನು ಮರಾಠ ಸಮುದಾಯದ ಮೀಸಲಾತಿ ಬೇಡಿಕೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರೀಗ ಕಲ್ಯಾಣೆಯ ಡೆತ್‌ ನೋಟ್‌ನ ಅಧಿಕೃತತೆಯನ್ನು ಪರಿಶೀಲಿಸುತ್ತಿದ್ದಾರೆ. ಆತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಆತನ ಮನೆಯವರಿಗೆ ಬಿಟ್ಟುಕೊಟ್ಟಿದ್ದಾರೆ. 

ಕಲ್ಯಾಣೆಯ ಸಾವಿನೊಂದಿಗೆ ಮರಾಠ ಮೀಸಲಾತಿ ಆಂದೋಲನಕ್ಕೆ ಬಲಿಯಾಗಿರುವವರ ಸಂಖ್ಯೆ ಕಳೆದೊಂದು ವಾರದಲ್ಲಿ ಐದಕ್ಕೇರಿದೆ. 

Advertisement

ಮರಾಠ ಮೀಸಲಾತಿ ಆಂದೋಲನ ಮುಂದುವರಿದಿರುವ ನಡುವೆಯೇ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ನಾಯಕರು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ರನ್ನು ಭೇಟಿಯಾಗಿ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಬೇಗನೆ ಒಂದು ನಿರ್ಧಾರವನ್ನು ಪ್ರಕಟಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಗೆ ನಿರ್ದೇಶ ನೀಡುವಂತೆ ಕೋರಿದರು. 

ಈ ನಡುವೆ ಮರಾಠ ಸಂಘಟನೆಗಳು ಆ.9ರಂದು ಮೀಸಲಾತಿ ಆಗ್ರಹಿಸಿ ಮುಂಬಯಿಯಲ್ಲಿ ತಾವು ಬೃಹತ್‌ ರಾಲಿ ನಡೆಸುವುದಾಗಿ ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next