ಕೋಲ್ಕತ : ಕೋಲ್ಕತದ ಬೆಹಲಾದಲ್ಲಿನ ಶಾಲೆಯಲ್ಲಿ ಮೂರು ವರ್ಷ ಪ್ರಾಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಇನ್ನೊಂದು ಪ್ರಕರಣ ಇದೀಗ ಹೊರಬಿದ್ದಿದೆ.
ಈ ಪ್ರಕರಣದ ಪ್ರಧಾನಿ ಆರೋಪಿಯಾಗಿರುವ ಶಾಲೆಯ ಶಿಕ್ಷಕೇತರ ಸಿಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ; ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ಗುರುವಾರಷ್ಟೇ ಕೋಲ್ಕತದ ಹೈ ಪ್ರೊಫೈಲ್ ಶಾಲೆಯೊಂದರಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬೆನ್ನಿಗೇ ಇದೀಗ ಅದೇ ಬಗೆಯ ಈ ಹೊಸ ಪ್ರಕರಣ ನಡೆದಿರುವುದು ಶಾಲಾ ಮಕ್ಕಳಲ್ಲಿ, ಹೆತ್ತವರಲ್ಲಿ ಮತ್ತು ಹೊಣೆಯರಿತ ನಾಗರಿಕರಲ್ಲಿ ತೀವ್ರ ಕಳವಳವನ್ನು ಉಂಟು ಮಾಡಿದೆ.
ಈ ಹೊಸ ಪ್ರಕರಣದಲ್ಲಿ ಮೂರು ವರ್ಷದ ಬಾಲೆಯ ಮೇಲೆ ಶಾಲೆಯ ಶಿಕ್ಷಕೇತರ ಸಿಬಂದಿಯೋರ್ವ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿಯ ತಾಯಿ, ಮೊದಲ ದೌರ್ಜನ್ಯದ ಬಗ್ಗೆ ದೂರು ನೀಡಿದಾಗ ಶಾಲಾ ಆಡಳಿತ ಅದನ್ನು ತಿರಸ್ಕರಿಸಿ, ಆರೋಪಿಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ, ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಯಿತು.
ಅನಂತರ 2ನೇ ಬಾರಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ತಾಯಿ ಪೊಲೀಸರಿಗೆ ದೂರು ನೀಡಿದರು. ಆಗಲೇ ವಿಷಯ ಜಗಜ್ಜಾಹೀರಾಯಿತು. ಸಂತ್ರಸ್ತ ಬಾಲಕಿಯ ಮೇಲೆ ಜುಲೈನಲ್ಲಿ ಒಂದು ಬಾರಿ ಮತ್ತು ಆಗಸ್ಟ್‌ನಲ್ಲಿ ಒಂದು ಬಾರಿ ಲೈಂಗಿಕ ದೌರ್ಜನ್ಯ ನಡೆದಿತ್ತು.
ನಿನ್ನೆ ಸೋಮವಾರ ಬಾಲಕಿಯ ಹೆತ್ತವರು ಮತ್ತು ಇತರ ಅನೇಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ ಶಾಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಆದರೂ ಪ್ರಯೋಜನವಾಗಿರಲಿಲ್ಲ.
ಪ್ರತಿಭಟನಕಾರರು ಆ ಬಳಿಕ ಜೇಮ್ಸ್ ಲಾಂಗ್ ಸರಾನಿ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಅನಂತರದಲ್ಲಿ ಇನ್ನೂ ದೊಡ್ಡ ರೀತಿಯಲ್ಲಿ ಪ್ರತಿಭಟನ ಮೆರವಣಿಗೆಯನ್ನು ನಡೆಸಿದರು. ಅವರನ್ನು ಚದುರಿಸಲು ಪೊಲೀಸರು ಲಾಠೀ ಚಾರ್ಜ್ ಮಾಡಿದರು.