Advertisement
ಅಂಡಮಾನ್ ದ್ವೀಪಗಳ ಸಮೀಪ 24 ಗಂಟೆಗಳಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗಲಿದ್ದು, ಅದು ಅನಂತರದ ಎರಡು ದಿನಗಳಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಾಡಾಗಲಿದೆ. ಆ ಬಳಿಕ ಇದು ಚಂಡಮಾರುತದ ಸ್ವರೂಪ ಪಡೆದು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಈಗಿನ ಮುನ್ಸೂಚನೆ ಪ್ರಕಾರ ಅದು ಪಾರಾದೀಪ್ ಕರಾವಳಿಗೆ ನ.10ರ ವೇಳೆಗೆ ತಲುಪುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಈಗಾಗಲೇ ಕರ್ನಾಟಕ ಕರಾವಳಿ ಮೂಲಕ ಸಾಗಿರುವ “ಮಹಾ’ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಪ್ರಸ್ತುತ ಅದರ ಕೇಂದ್ರ ಬಿಂದು 580 ಕಿ.ಮೀ. ದೂರ ಸಮುದ್ರದಲ್ಲಿದೆ. ನ.4ರಂದು ಅದು ಈಗ ಸಾಗುತ್ತಿರುವ ಹಾದಿಯಿಂದ ತಿರುವು ಪಡೆದು ಗುಜರಾತ್ ಕರಾವಳಿಯತ್ತ ಮುಖ ಮಾಡಲಿದೆ. ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿರುವ ಇದರ ವೇಗ ಗರಿಷ್ಠವೆಂದರೆ ಗಂಟೆಗೆ 185 ಕಿ.ಮೀ.ವರೆಗೆ ತಲುಪಲಿದೆ. ಇದು ನ. 6ರ ಮಧ್ಯರಾತ್ರಿ ವೇಳೆ ಗುಜರಾತ್‌ನ ದ್ವಾರಕಾ ಕಿನಾರೆಗೆ ಅಪ್ಪಳಿಸಲಿದ್ದು, ಇದರಿಂದಾಗಿ ಗುಜರಾತ್ ಮತ್ತು ಸೌರಾಷ್ಟ್ರಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲ್ಲಿನ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಬಂದರುಗಳಲ್ಲಿ ಎಚ್ಚರಿಕೆಯ ಬಾವುಟ ಹಾರಿಸಲಾಗಿದೆ ಎಂದು ಗುಜರಾತ್‌ನ ಅಧಿಕಾರಿಗಳು ತಿಳಿಸಿದ್ದಾರೆ.