Advertisement

ಕಲಬುರಗಿಯಲ್ಲಿ ಕೋವಿಡ್-19ಗೆ ಎರಡನೇ ಬಲಿ: ಮತ್ತೊಂದು ಹೊಸ ಪ್ರಕರಣವೂ ಪತ್ತೆ!

09:12 AM Apr 09, 2020 | keerthan |

ಕಲಬುರಗಿ: ಕೋವಿಡ್ -19 ಸೋಂಕಿಗೆ ದೇಶದಲ್ಲೇ ‌ಮೊದಲು ಬಲಿಯಾದ ಕಲಬುರಗಿಯಲ್ಲಿ ‌ಮತ್ತೋರ್ವ ಸಾವನ್ನಪ್ಪಿದ್ದಾನೆ‌. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾನೆ.

Advertisement

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಟ್ಟಿರುವ ಇಎಸ್ಐ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಈತನ ಸಾವನ್ನಪ್ಪಿದ್ದಾನೆ.

ಖಾಸಗಿ ಆಸ್ಪತ್ರೆ ಸೀಜ್: ಸಾವಿಗೂ‌ ಮುನ್ನ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯನ್ನು ಜಿಲ್ಲಾಡಳಿತ ಸೀಜ್ ಮಾಡಿದೆ. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ವ್ಯಕ್ತಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದರೂ ಆಸ್ಪತ್ರೆಯವರು ಜಿಲ್ಲಾಡಳಿತದ ಗಮನಕ್ಕೆ ತಂದಿರಲಿಲ್ಲ ಎಂದು ಹೇಳಲಾಗಿದೆ.

ಎರಡನೇ ಸಾವು: ಸೌದಿ ಅರೇಬಿಯಾದಿಂದ ಮರಳಿದ್ದ 76 ವರ್ಷದ ವೃದ್ದ ಮಾ.10ರಂದು ಸಾವನ್ನಪ್ಪಿದ್ದ. ಸಾವಿಗೂ ಆತನ ಗಂಟಲು ದ್ರಾವಣ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಮಾ.12ರಂದು ಹೊರ ಬಂದ ವರದಿಯಲ್ಲಿ ವೃದ್ಧ ಕೋವಿಡ್- 19 ಸೋಂಕಿನಿಂದ ಸಾವನ್ನಪ್ಪಿದ್ದು ಬಹಿರಂಗಗೊಂಡಿತ್ತು. ಈ ಮೂಲಕ ದೇಶದಲ್ಲೇ ಕೋವಿಡ್-19ಗೆ ಮೊದಲ ಸಾವು ದಾಖಲಾಗಿತ್ತು. ‌

ಇದಾದ 29 ದಿನದೊಳಗೆ ಜಿಲ್ಲೆಯಲ್ಲಿ ಎರಡನೇ ಸಾವು ದಾಖಲಾಗಿದೆ. ಆತಂಕಕಾರಿ ಅಂಶವೆಂದರೆ ಈತ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ ಎಂದು ಸರ್ಕಾರ ಹೇಳಿದೆ.

Advertisement

ಸೋಂಕಿತನ ತಾಯಿಗೂ ಕೋವಿಡ್-19: ಜಿಲ್ಲೆಯಲ್ಲಿ ಇಂದು ಮತ್ತೊಂದು ಹೊಸ ಕೋವಿಡ್-19 ಪ್ರಕರಣ‌ ಕೂಡ ಪತ್ತೆಯಾಗಿದೆ. ಕಲಬುರಗಿ ನಗರದ 57 ವರ್ಷದ ವ್ಯಕ್ತಿಗೆ ಮಂಗಳವಾರ ಸೋಂಕು ದೃಢಪಟ್ಟಿತ್ತು. ಇವತ್ತು ಆತನ ತಾಯಿ‌ಗೆ ಕೋವಿಡ್-19 ಇರೋದು ಖಚಿತವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next