ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮತ್ತೂಂದು ಹೊಡೆತ ಬಿದ್ದಿದೆ. ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅವರ ಆಪ್ತ ಅಸದ್ ಉಮರ್ ರಾಜೀನಾಮೆ ನೀಡಿದ್ದಾರೆ.
ಅಲ್ಲದೇ ಪಿಟಿಐ ಆರ್ಥಿಕ ತಂಡದ ಮುಖ್ಯಸ್ಥ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದ್ದಾರೆ. ಮೇ 9ರಂದು ಪಿಟಿಐ ಕಾರ್ಯಕರ್ತರು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಡಿಯಾಲ ಜೈಲಿನಲ್ಲಿದ್ದ ಅವರು, ಬುಧವಾರ ಬಿಡುಗಡೆಗೊಂಡರು. “ಈ ರೀತಿಯ ಸನ್ನಿವೇಶದಲ್ಲಿ ಪಕ್ಷವನ್ನು ಮುನ್ನಡೆಸಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಮೇ 9ರಂದು ಅಪಾಯಕಾರಿ ಘಟನೆ ಜರುಗಿತು. ನನ್ನ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ. ಆದರೆ ನಾನು ಪಕ್ಷದಲ್ಲಿ ಇರುತ್ತೇನೆ”i ಎಂದು ಅಸದ್ ಉಮರ್ ಹೇಳಿದ್ದಾರೆ.