ಉಡುಪಿ: ಪೆರಂಪಳ್ಳಿ ರಸ್ತೆಯ ಸುಂದರಿಗೇಟ್‌ನ ಅವೈಜ್ಞಾನಿಕ ತಿರುವಿನಲ್ಲಿ ವಾರದ ಅಂತರದಲ್ಲಿ ಮತ್ತೂಂದು ಅವಘಡ ಸಂಭವಿಸಿದೆ.
ಶನಿವಾರ ಮಣಿಪಾಲದಿಂದ ಅಂಬಾಗಿಲುವಿನತ್ತ ತೆರಳುತ್ತಿದ್ದ ಹುಂಡೈ ಐ20 ಕಾರು ತಿರುವಿನಲ್ಲಿ ಪಲ್ಟಿಯಾಗಿ ಬಿತ್ತು. ಅದರಲ್ಲಿದ್ದ 6 ಮಂದಿ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲವೇ ಗಂಟೆಗಳ ಅಂತರದಲ್ಲಿ ಮಹೀಂದ್ರ ಎಕ್ಸ್‌ಯುವಿ ಕಾರು ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಪಲ್ಟಿಯಾಗಿ ಆ ಕಾರಿನ ಮೇಲೆಯೇ ಬಿತ್ತು. ಅದರಲ್ಲಿದ್ದ ಯುವಕ ಹಾಗೂ ಯುವತಿ ಅಪಾಯದಿಂದ ಪಾರಾಗಿದ್ದಾರೆ.
14ನೇ ಅಪಘಾತ
Related Articles
ಇಲ್ಲಿ ಈಗಾಗಲೇ 12ರಿಂದ 14 ಅಪಘಾತಗಳು ನಡೆದಿವೆ. ಅ.17, 20, 26 ಹೀಗೆ ಸಾಲು ಸಾಲು ಅಪಘಾತ ನಡೆಯುತ್ತಿದ್ದರೂ ಸಂಬಂಧಪಟ್ಟವರು ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ನಡೆದ ನಡೆದ ಅಪಘಾತದಲ್ಲಿ ಒಂದು ಕಾರು ಬೆಂಗಳೂರು ನೋಂದಣಿಯದ್ದಾದರೆ ಮತ್ತೂಂದು ತಮಿಳುನಾಡು ನೋಂದಣಿ ಹೊಂದಿದೆ.
ತಪ್ಪಿದ ಭಾರೀ ಅವಘಡ
ಅಪಘಾತಕ್ಕೀಡಾದ ಕಾರುಗಳೆರಡೂ ಸುಂದರಿಗೇಟ್ ಬಳಿಯ ಶಯೋಶ್ ಅವರ ಮನೆಯ ಕಾಂಪೌಂಡ್‌ನ ಒಳಗೆ ಹೋಗಿಬಿದ್ದಿದೆ. ಈ ಮನೆಯವರು ಯಾವಾಗಲು ಇದೇ ಸ್ಥಳದಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುತ್ತಾರೆ. ಆದರೆ ಘಟನೆ ನಡೆದ ಸಂದರ್ಭ ಯಾರೂ ಇಲ್ಲದ ಕಾರಣ ಭಾರೀ ಅವಘಡ ತಪ್ಪಿದಂತಾಗಿದೆ. ಇಲ್ಲಿ ಶಾಶ್ವತ ಪರಿಹಾರ ಕಲ್ಪಿಸಿದರಷ್ಟೇ ಸಮಸ್ಯೆ ನಿವಾರಣೆ ಸಾಧ್ಯ.
ಶೀಘ್ರ ಅಳವಡಿಕೆ: ಪೆರಂಪಳ್ಳಿಯ ಸುಂದರಿಗೇಟ್ ಬಳಿ ಸೂಚನ ಫಲಕ ಹಾಗೂ ಉಬ್ಬುತಗ್ಗು ಅಳವಡಿಕೆ ಮಾಡುವಂತೆ ಈಗಾಗಲೇ ಅಸಿಸ್ಟೆಂಟ್ ಎಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಇದನ್ನು ಅಳವಡಿಕೆ ಮಾಡಿದಲ್ಲಿ ತಕ್ಕಮಟ್ಟಿಗೆ ಸಮಸ್ಯೆ ಪರಿಹಾರ ಕಾಣಲಿದೆ. –ಜಗದೀಶ್ ಭಟ್, ಎಇಇ ಲೋಕೋಪಯೋಗಿ ಇಲಾಖೆ
ವಾರದೊಳಗೆ ಕಾಮಗಾರಿ: ಇಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ ಮಾಹಿತಿ ಬಂದಿದೆ. ರ್‍ಯಾಂಬಲ್ ಸ್ಟ್ರಿಪ್ ಮಾದರಿಯ ಹಂಪ್ಸ್ ಗಳನ್ನು ತಿರುವು ರಸ್ತೆಯ ಎರಡೂ ಬದಿಯಲ್ಲಿ ಅಳವಡಿಸಲಾಗುವುದು. ಹಾಗೆಯೇ ಸೂಚನ ಫಲಕಗಳನ್ನೂ ಅಳವಡಿಸಲಾಗುವುದು. ಈ ಎಲ್ಲ ಕಾಮಗಾರಿಗಳನ್ನು ವಾರದೊಳಗೆ ಪೂರ್ಣಗೊಳಿಸಲಾಗುವುದು. –ಗಿರೀಶ್, ಅಸಿಸ್ಟೆಂಟ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ