ಕಲಬುರಗಿ: ದೇಶದಲ್ಲೇ ಮೊದಲು ಕೋವಿಡ್-19 ಸೋಂಕಿಗೆ ಬಲಿಯಾದ ಕಲಬುರಗಿಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. 17 ವರ್ಷದ ಬಾಲಕಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದು, ಬಾಲಕಿ ಮೃತಪಟ್ಟ ಐದು ದಿನಗಳ ನಂತರ ಪ್ರಯೋಗಾಲಯದ ವರದಿ ಹೊರ ಬಂದಿದೆ.
ಆಳಂದ ಪಟ್ಟಣದ ಬಾಲಕಿ ಜ್ವರ, ತಲೆನೋವು, ಉಸಿರಾಟ ಮತ್ತು ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಹೀಗಾಗಿ ಜೂ.4ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಬಾಲಕಿ ಮೃತಪಟ್ಟಿದ್ದಾಳೆ.
ಆದರೆ, ಈ ಬಾಲಕಿಗೆ ಕೋವಿಡ್ ಸೋಂಕು ಹೇಗೆ ಹರಡಿತ್ತು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಬಾಲಕಿ ಸಾವಿನ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಮಹಾಮಾರಿಗೆ ತುತ್ತಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮತ್ತೆ 10 ಜನರಿಗೆ ಸೋಂಕು: ಮೃತ ಬಾಲಕಿ (ಪಿ-5900) ಸೇರಿ ಮಂಗಳವಾರ ಒಟ್ಟು ಹತ್ತು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಲ್ಲಿ ಉಸಿರಾಟದ ಸಮಸ್ಯೆಯುಳ್ಳ 30 ವರ್ಷದ ವ್ಯಕ್ತಿ (ಪಿ-5909)ಗೂ ಸೋಂಕು ಪತ್ತೆಯಾಗಿದೆ.
ಉಳಿದಂತೆ ಮಹಾರಾಷ್ಟ್ರದಿಂದ ಮರಳಿ ಬಂದಿರುವ ಎಂಟು ಜನರಿಗೆ ಕೋವಿಡ್ ಮಹಾಮಾರಿ ಕಾಣಿಸಿಕೊಂಡಿದೆ. ಇನ್ನು, ಒಟ್ಟು ಸೋಂಕಿತರ ಸಂಖ್ಯೆ 769ಕ್ಕೆ ಏರಿಕೆಯಾಗಿದೆ. ಇದರಲ್ಲಿ 213 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 548 ಸೋಂಕಿತರಿಗೆ ಐಸೋಲೇಷನ್ ವಾರ್ಡ್’ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.