ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಪ್ರಸಂಗಕರ್ತ ತಾನು ರಚಿಸಿದ ಪದಗಳಿಗೆ ರಾಗ ತಾಳಗಳನ್ನು ನಮೂದಿಸಿರುತ್ತಾನಷ್ಟೆ. ಹಾಗೆ ನಿರೂಪಿಸುವಲ್ಲಿ ಕಥಾವಸ್ತು, ಸನ್ನಿವೇಶ, ಪಾತ್ರ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಸನ್ನಿವೇಶದ ಭಾವ ಪ್ರಕಟನೆಗೆ ಯಾವ ರಾಗ ಸೂಕ್ತ ಎಂಬುದನ್ನು ಖಚಿತಪಡಿಸಿಕೊಂಡಿರುತ್ತಾನೆ. ಆದರೆ ಈಗ ಭಾಗವತರು ಅಂಕಿತರಾಗ ತಾಳಗಳನ್ನು ತೊರೆದು ಹೊಸ ರಾಗವನ್ನೋ ಅಥವಾ ಬಳಕೆಯಲ್ಲಿರುವ ಇನ್ನಾವುದೋ ರಾಗವನ್ನು ಬಳಸಿ ಹಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಒಂದು ಉದಾಹರಣೆ; ಜಾಂಬವತಿ ಕಲ್ಯಾಣದ ಕೃಷ್ಣನ ಪದ, “ಕಿರುಬೆಟ್ಟಿನೊಳಗೆ ನಾನು….’ ಈ ಪದದ ಅಂಕಿತರಾಗ “ಬೈರವಿ’ ತಾಳ-ಅಷ್ಟ ಭಾವ- ಪೌರುಷ ಸೂಚಕವಾದ ವೀರರಸ. ಈಗ ಈ ಪದವನ್ನು “ಮೋಹನ’ ರಾಗ ಹಾಗೂ ಅದಕ್ಕನುಕೂಲವಾದ ತಾಳದಲ್ಲಿ ಹಾಡುತ್ತಾರೆ. ಮುಂದುವರಿದು ಚಾಲ್ ಹಾಕಿ, ಪದವನ್ನು ಛಿದ್ರಛಿದ್ರಗೊಳಿಸಿ, ಗಾನದ ಆಕಾರವನ್ನು ಕೆಡಿಸಿ, ಅನಗತ್ಯದ ಅಭಿನಯಕ್ಕೆ ಅವಕಾಶ ಕಲ್ಪಿಸಿ, ಒಂದಿಷ್ಟು ಕುಣಿಸಿ ಎಳೆದು ಹಾಡುವುದನ್ನು ಕಾಣುತ್ತಿದ್ದೇವೆ.
ಇಲ್ಲಿ ಪದದ ಭಾವಕ್ಕೂ ಬಳಸಿದ ರಾಗ ಹಾಗೂ ಕುಣಿಸುವ ರೀತಿಗೂ ಸಂಬಂಧ ಕಂಡುಬರುವುದಿಲ್ಲ. ಇದು ಸನ್ನಿವೇಶದ ಅಣಕವೆಂದರೆ ತಪ್ಪಾಗದು. ಈ ಅನುಭವ ಓರ್ವ ಸಾಮಾನ್ಯ ಪ್ರೇಕ್ಷಕನ ಅರಿವಿಗೂ ಬಾರದೆ ಇರು ವಂಥದ್ದಲ್ಲ. ತಾಳದ ತಾಂತ್ರಿಕತೆ, ಸಾಮಾನ್ಯ ಪ್ರೇಕ್ಷಕನ ಅರಿವಿಗೆ ಮೀರಿದ ವಿಚಾರ; ಆದಾದರೂ ಭಾವದ ಅನುಭವ ಸಾಮಾನ್ಯ ಪ್ರೇಕ್ಷಕನಿಗೂ ಆಗುತ್ತದೆ.
ಈ ರೀತಿಯ ಪ್ರದರ್ಶನ ಒಂದೆರಡು ದಶಕಗಳ ಬೆಳವಣಿಗೆ. ಹಿಂದೆ ಈ ಸನ್ನಿವೇಶವನ್ನು ವೀರರಸಯುಕ್ತವಾಗಿಯೇ ನಿರ್ವಹಿಸುವ ಕ್ರಮವಿತ್ತು. “ಆರು ಎನ್ನಯ ಗುಹೆಯ…’ ಎಂಬಲ್ಲಿಂದ “ಅರರೆ ಎನ್ನೊಳೆಷ್ಟು ಛಲದಿ…’ ಎಂಬಲ್ಲಿಯ ತನಕದ ಸನ್ನಿವೇಶ ಗಂಭೀರವಾಗಿ ಸಾಗುತ್ತದೆ. ಆಗ ವೇಷಧಾರಿಗಳ ರಣೋತ್ಸಾಹದ ಹೆಜ್ಜೆಗಾರಿಕೆ ಹಾಗೂ ಪುಂಖಾನುಪುಂಖವಾಗಿ ಬರುವ ವಿರೋಚಿತ ವಾಗ್ಝರಿ ಮೈನವಿರೇಳುವಂತೆ ಮಾಡುತ್ತಿತ್ತು. ಅದೊಂದು ನೈಜ ರಣಕಣದಂತೆ ಭಾಸವಾಗುತ್ತಿತ್ತು.
ಈಗ ನಾವು ಕಾಣುವ ನಿರ್ವಹಣೆಯಲ್ಲಿ ಪದ, ಕುಣಿತ ಹಾಗೂ ಮಾತಿನ ನಡುವೆ ಯಾವ ಸಾಂಗತ್ಯವೂ ಇಲ್ಲದೆ ಸನ್ನಿವೇಶದ ನೈಜ ಭಾವ ಪ್ರಕಟವಾಗುತ್ತಿಲ್ಲವೆಂಬುದು ಪ್ರೇಕ್ಷಕರ ಅಳಲು. ಹಾಗಾಗಿ ಭಾಗವತರು ಅಂಕಿತ ರಾಗ ತಾಳ ಬದಲಾಯಿಸುವ ಮುನ್ನ ಸಾಕಷ್ಟು ವಿವೇಚಿಸಿ ಬದಲಾದ ರಾಗ ಪದದ ಸಾಹಿತ್ಯದ ಭಾವ ಪ್ರಕಟಿಸಬಲ್ಲದೇ ಎಂದು ಖಚಿತಪಡಿಸಿಕೊಳ್ಳುವುದು ವಿಹಿತ. ಈಗ ಎಲ್ಲ ಪ್ರಸಂಗಗಳಲ್ಲಿಯೂ ಹೀಗೆ ಪದದ ಭಾವಕ್ಕೆ ಸಂಬಂಧ ಇಲ್ಲದ ಕುಣಿತ ನಡೆಸುವುದೇ ಈಗಿನ ಭಾಗವತಿಕೆಯ ಮುಖ್ಯ ಲಕ್ಷಣವಾಗಿದೆ. ಒಂದು ಭಾವ ಪ್ರಧಾನವಾದ ಕಲೆ ಕೇವಲ ರಂಜನೆಯ ಕಲೆಯಾಗಿ ಮಾರ್ಪಾಡಾಗುತ್ತಿರುವುದು ಖೇದದ ವಿಚಾರ.
ಇಷ್ಟಕ್ಕೆಲ್ಲ ಕಾರಣ ಆಯಾ ತಿಟ್ಟಿನ ಮಟ್ಟನ್ನು ಕಡೆಗಣಿಸಿರುವುದು. ಯಕ್ಷಗಾನದ ತಾಳಾವರ್ತನೆಯಲ್ಲಿ ನಿಖರತೆ ಇಲ್ಲ ಅಥವಾ ಇದ್ದರೂ ಪಾಲಿಸುವುದಿಲ್ಲ ಎಂಬ ಅಭಿಪ್ರಾಯ ಸಂಗೀತಜ್ಞರಲ್ಲಿದೆ. ಇಂಥ ದೋಷಗಳು ಕಲೆಯ ಅಸ್ತಿತ್ವ ಹಾಗೂ ಸ್ಥಾನಮಾನ ಉಳಿಸಿಕೊಳ್ಳಲು ಮಾಡುವ ಪ್ರಯತ್ನಕ್ಕೆ ಪ್ರತಿಕೂಲವಾಗಿ ಕೆಲಸ ಮಾಡೀತು. ನಿಖರತೆ ಇಲ್ಲದಿದ್ದರೆ, ಮುಂದೆ ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ಗಿಟ್ಟಿಸಿಕೊಳ್ಳುವ ಮಾತಂತಿರಲಿ, ಇದಕ್ಕೊಂದು ನಿಶ್ಚಿತ ತಳಹದಿ ಇದೆ ಎಂದು ಪ್ರತಿಪಾದಿಸಲೂ ಅಸಾಧ್ಯ. ಆದುದರಿಂದ ಹಿಮ್ಮೇಳದವರೆಲ್ಲ ಸೇರಿ ಒಂದು ಸರ್ವಸಮ್ಮತ ನಿಲುವಿಗೆ ಬರಬೇಕಾದ ಅನಿವಾರ್ಯತೆ ಇದೆ.
ಬೇಳೂರು ರಾಘವ ಶೆಟ್ಟಿ