Advertisement

ಮುಳ್ಳೂರು ಬಸವೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ

09:21 PM May 16, 2019 | sudhir |

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಬಸವೇಶ್ವರ ದೇವರ ಮತ್ತು ಗ್ರಾಮದ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಬೆಳಗ್ಗೆ ಸಂಪನ್ನಗೊಂಡಿತು. ಸೋಮವಾರ ಅಪರಾಹ್ನ 3 ಗಂಟೆಗೆ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸದ ನಂತರ ಬಸವೇಶ್ವರ ದೇವರಿಗೆ ಜೇನು, ಎಳನೀರು, ಹಣ್ಣು ಹಂಪಲು ನೈವೇದ್ಯ ಅರ್ಪಿಸುವುದರೊಂದಿಗೆ ಪೂಜಾ ಮಹೋ ತ್ಸವಕ್ಕೆ ಚಾಲನೆ ನೀಡಲಾಯಿತು. ಅನಂತರ ದೇಗುಲದಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರು.

Advertisement

ಸಂಜೆ 6 ಗಂಟೆಗೆ ಮುಳ್ಳೂರು ಜಂಕ್ಸನ್‌ ಅರಳಿಕಟ್ಟೆಯಿಂದ ಗ್ರಾಮದ ನೂರಾರು ಮಳೆಯರು ಮತ್ತು ಹೆಣ್ಣು ಮಕ್ಕಳು ಕಲಶ ಹೊತ್ತು ವಾದ್ಯಾಗೋಷ್ಠಿಯೊಂದಿಗೆ ದೇಗುಲದ ವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅನಂತರ ದೇವಾಲಯದಲ್ಲಿ ವಿವಿಧ ಪೂಜಾದಿ ವಿಧಾನಗಳನ್ನು ನಡೆಸಲಾಯಿತು. ರಾತ್ರಿ ಭಕ್ತಾದಿಗಳಿಗೆ, ಗ್ರಾಮಸ್ಥರಿಗೆ ಅನ್ನ ದಾನವನ್ನು ಏರ್ಪಡಿಸಲಾಗಿತು. ರಾತ್ರಿ 11 ಗಂಟೆಯಿಂದ ಮಂಗಳವಾರ ಬೆಳಗ್ಗಿನ ಜಾವ 5 ಗಂಟೆಯ ತನಕ ಭಕ್ತಾದಿಗಳಿಂದ ಮತ್ತು ಗ್ರಾಮಸ್ಥರಿಂದ ದೇವರ ಉತ್ಸವದ ಅಂಗವಾಗಿ ಸುಗ್ಗಿ ಕುಣಿತ ನೆರವೇರಿತು.

ಬೆಳಗ್ಗೆ 5.30ಕ್ಕೆ ಬಸವೇಶ್ವರ ದೇವರ ವಿಗ್ರಹವನ್ನು ಅಡ್ಡ ಪಲ್ಲಕಿಯಲ್ಲಿ ಕುಳ್ಳಿರಿಸಿ ದೇವಾಲಯದ ಸುತ್ತ ಅಡ್ಡ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಬೆಳಗ್ಗೆ 7-30 ವರೆಗೆ ಉತ್ಸವದ ಅಂಗವಾಗಿ ಕೆಂಡ ಹಾಯುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ದೇವರಿಗೆ ಮಹಾ ಮಂಗಳಾರತಿ ಸಲ್ಲಿಸಿದ ಅನಂತರ ಪೂಜಾ ಮಹೋತ್ಸವ ಸಂಪನ್ನ ಗೊಂಡಿತು.

ದೇವಾಲಯದ ಪ್ರಧಾನ ಅರ್ಚಕ ಶಿವಶಂಕರ್‌ ನೇತೃತ್ವದಲ್ಲಿ ಪೂಜಾ ವಿಧಾನ ನೆರವೇರಿತು. ಪೂಜಾ ಮಹೋತ್ಸವದಲ್ಲಿ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next