Advertisement

5 ತಿಂಗಳ ಮೊದಲೇ ಸುರಿದ ವಾರ್ಷಿಕ ಮಳೆ

02:45 PM Jul 21, 2018 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಕಳೆದ 12 ವರ್ಷಗಳ ನಂತರ ವಾರ್ಷಿಕ ವಾಡಿಕೆ ಮಳೆಗಿಂತಲೂ ಹೆಚ್ಚು ಮಳೆ ಈಗಾಗಲೇ ಸುರಿದಿದ್ದು, ರೈತರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಇನ್ನೂ ಎರಡು ತಿಂಗಳು ಇದೇ ರೀತಿಯಾಗಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ.

Advertisement

ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಜನರು ಸೂರ್ಯನನ್ನೇ ಕಾಣದಂತಾಗಿದೆ. ಯಾವಾಗ ಬಿಸಿಲು ನೋಡುತ್ತೇವೆಯೋ ಎಂದು ಕಾತರಿಸುತ್ತಿದ್ದಾರೆ. ತಾಲೂಕಿನಲ್ಲಿ ಸಂಪೂರ್ಣ ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ ವಾಡಿಕೆಯಂತೆ 1074 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 2365 ಮಿ.ಮೀ. ಮಳೆಯಾಗಿದ್ದು, ಶೇ.120ಕ್ಕೂ ಹೆಚ್ಚು ಅಧಿಕ ಮಳೆ ಬಿದ್ದಿದೆ. ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ ತಾಲೂಕಿನಲ್ಲೇ ಅತಿ ಹೆಚ್ಚು ಮಳೆ ಬಿದ್ದಿರುವ ಹೋಬಳಿಯಲ್ಲಿ ಹೆತ್ತೂರು ಮೊದಲ ಸ್ಥಾನದಲ್ಲಿದೆ. ಬೆಳಗೋಡ ಕೊನೆಯ ಸ್ಥಾನದಲ್ಲಿದೆ.

ಕಾಫಿ, ಮೆಣಸು ಬೆಳೆಗಾರರಲ್ಲಿ ಆತಂಕ: ಮಳೆ ಧಾರಾಕಾರವಾಗಿ ಸುರಿಯುತ್ತಿರುವುದು, ಸತತವಾಗಿ ಶೀತ, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಕಾಫಿ ಹಾಗೂ ಮೆಣಸಿನ ಕಾಳು ಉದುರುತ್ತಿದೆ. ಇದು ರೈತರನ್ನು ಸಂಕಷ್ಟಕ್ಕೆ ನೂಕಿದೆ. ಅತಿಯಾದ ಶೀತದಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದು ರೈತರಿಗೆ ಮತ್ತಷ್ಟು ತಲೆ ನೋವು ತಂದಿದೆ.

ಕಳೆದ 2 ದಿನಗಳಿಂದ ಮಳೆಯ ಆರ್ಭಟ ತುಸು ಕಡಿಮೆಯಾಗಿದ್ದರೂ ಹೆತ್ತೂರು ಹೋಬಳಿಯಲ್ಲಿ ಮತ್ತಷ್ಟು ಮಳೆ ಹಾನಿಯುಂಟಾಗಿದೆ. ಮಳೆಯ ನಡುವೆಯೂ ಗ್ರಾಮಾಂತರ ಪ್ರದೇಶಗಳ ಜನರು ಗುರುವಾರ ಸಂತೆಯ ದಿನವಾಗಿದ್ದರಿಂದ ಪಟ್ಟಣಕ್ಕೆ ಆಗಮಿಸಿ ದಿನನಿತ್ಯದ ವಸ್ತುಗಳನ್ನು ಖರೀದಿಸಿದರು. ಹೆತ್ತೂರು, ಹಾನುಬಾಳ್‌, ಮಾರನಹಳ್ಳಿ ಸೇರಿದಂತೆ ಮತ್ತಿತರ ಕಡೆ ವಿದ್ಯುತ್‌ ವ್ಯತ್ಯಯ ನಿರಂತರವಾಗಿ ಮುಂದುವರಿದಿದೆ. ಗ್ರಾಮಸ್ಥರು ಕರೆಂಟ್‌ ಇಲ್ಲದೇ ಕತ್ತಲೆಯಲ್ಲೇ ಜೀವನ ನಡೆಸುವಂತಾಗಿದೆ.

ಮೊಬೈಲ್‌ ಚಾರ್ಚ್‌ ಮಾಡಿಕೊಳ್ಳಲು ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 75 ಕೊಲ್ಲಹಳ್ಳಿ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ.
ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಯಿಂದಾಗಿ ಮರಗಳು ನಿರಂತರವಾಗಿ ಧರೆಗುರುಳುತ್ತಿವೆ. ಬಹುತೇಕ ಹಳ್ಳ, ಕೆರೆಗಳು,
ಭರ್ತಿಯಾಗಿದ್ದು, ಅಂತರ್ಜಲ ಎಲ್ಲಂದರಲ್ಲಿ ಉಕ್ಕುತ್ತಿದೆ.

Advertisement

ತಾಲೂಕಿನಲ್ಲಿ ವಾರ್ಷಿಕವಾಗಿ ಬೀಳಬೇಕಿದ್ದ ಮಳೆ 5 ತಿಂಗಳಿಗೂ ಮೊದಲೇ ಸುರಿದಿದೆ. ಮಳೆಯಿಂದಾಗಿ ಹಲವೆಡೆ
ಹಾನಿಯುಂಟಾಗಿದೆ. ಭತ್ತದ ಗದ್ದೆ, ಕಾಫೀ, ಮೆಣಸು ಮುಂತಾದ ಬೆಳೆ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಪರದಾಡಬೇಕಾಗುತ್ತದೆ.
 ಸುಬ್ರಹ್ಮಣ್ಯ, ಸಹಾಯಕ ಕೃಷಿ ನಿರ್ದೇಶಕ

ಒಸ್ಸೂರು ಎಸ್ಟೇಟ್‌ನಲ್ಲಿ ದಾಖಲಾದ ಮಾಹಿತಿ ಪ್ರಕಾರ ಹಲವು ವರ್ಷಗಳ ಬಳಿಕ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯ ಪ್ರಮಾಣ ದಾಖಲಾಗಿದೆ. ನಿರಂತರ ವರ್ಷಧಾರೆಯಿಂದಾಗಿ ರಸ್ತೆ, ಚರಂಡಿ, ಮನೆ, ಮರಗಳು ಧರಾಶಾಹಿಯಾಗಿವೆ. ಬೆಳೆ ನಷ್ಟದಿಂದ ಇಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾಲೂಕಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.
 ಬಿ.ಎ.ಜಗನ್ನಾಥ್‌, ಜೆಡಿಎಸ್‌ ರಾಜ್ಯ ಉಪಾಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next