Advertisement

ಮಿಲ್‌ ಕಟ್ಟಡದಲ್ಲಿ ಅಣ್ಣಿಗೇರಿ ತಾಲೂಕು ಕಚೇರಿ!

12:16 PM May 19, 2022 | Team Udayavani |

ಧಾರವಾಡ: ಹೇಳಿಕೊಳ್ಳಲು ಹೊಸ ತಾಲೂಕು, ಅದಕ್ಕೊಂದು ಸ್ವಂತ ತಾಲೂಕು ಕಚೇರಿ ಕಟ್ಟಡವಿಲ್ಲ. ಅಗತ್ಯವಾದ ಸೌಲಭ್ಯಗಳು ಇಲ್ಲ. 25ಕ್ಕೂ ಅಧಿಕ ಇಲಾಖೆಗಳ ಕಚೇರಿಗಳೂ ಇಲ್ಲ. ಸಿಬ್ಬಂದಿಗಳೂ ಇಲ್ಲ. ಒಟ್ಟಿನಲ್ಲಿ ಹೊಸ ತಾಲೂಕು ಎಂಬ ಹೆಸರು ಬಂತೆ ವಿನಃ ಅಭಿವೃದ್ಧಿಗೆ ಪೂರಕವಾಗುವ ಅಗತ್ಯ ಸೌಲಭ್ಯಗಳು ಮಾತ್ರ ಸರ್ಕಾರದಿಂದ ಇನ್ನೂ ಲಭಿಸಿಲ್ಲ.

Advertisement

ಹೌದು. ಧಾರವಾಡ ಜಿಲ್ಲೆಯಲ್ಲಿ 2018ರಲ್ಲಿ ಘೋಷಣೆಯಾದ ಮೂರು ಹೊಸ ತಾಲೂಕುಗಳ ಇಂದಿನ ದುಃಸ್ಥಿತಿ ಇದು. ಅಳ್ನಾವರ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕುಗಳು ರಚನೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳು ಕಳೆದರೂ, ತಾಲೂಕು ಆಡಳಿತವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಅಗತ್ಯವಾದ ಎಲ್ಲಾ ಇಲಾಖಾವಾರು ಸೌಲಭ್ಯಗಳು ಮಾತ್ರ ಇನ್ನು ಈ ಹೊಸ ತಾಲೂಕುಗಳಿಗೆ ಲಭಿಸಿಲ್ಲ.

ತಾಲೂಕು ಕಚೇರಿಗಳಿಗೆ ಶಾಶ್ವತ ಕಟ್ಟಡಗಳೇ ಇನ್ನು ನಿರ್ಮಾಣವಾಗಿಲ್ಲ. ಅಳ್ನಾವರದಲ್ಲಿ ತಾಲೂಕು ಕಚೇರಿಗಳು ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ನಡೆದರೆ, ಅಣ್ಣಿಗೇರಿಯಲ್ಲಿ ಬಾಡಿಗೆ ಕಟ್ಟಡ ಮಿಲ್‌ನಲ್ಲಿ ಕಚೇರಿ ನಡೆಯುತ್ತಿದೆ. ಹುಬ್ಬಳ್ಳಿ ನಗರ ತಾಲೂಕಿನ ಕಥೆಯೂ ಬೇರೆಯಾಗಿಲ್ಲ. ಒಟ್ಟಿನಲ್ಲಿ ಹೊಸ ತಾಲೂಕು ಕಚೇರಿಗಳಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಲಭಿಸಿಲ್ಲ.

ಅಳ್ನಾವರ: ಧಾರವಾಡ ಜಿಲ್ಲೆಯಲ್ಲಿಯೇ ಅತ್ಯಂತ ಸಣ್ಣ ತಾಲೂಕು ಅಳ್ನಾವರ.13 ಗ್ರಾಪಂ ವ್ಯಾಪ್ತಿ ಹೊಂದಿರುವ ತಾಲೂಕು ಇದಾಗಿದ್ದು, ಸದ್ಯಕ್ಕೆ ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಆಡಳಿತ ಯಂತ್ರ ಹೇಗೋ ಸಾಗುತ್ತಿದೆ. ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಕಚೇರಿ ಮಾತ್ರ ಪೂರ್ಣ ಪ್ರಮಾಣದಲ್ಲಿದ್ದು, ಇತರ ಇಲಾಖೆಗಳು ಸೇರಿದಂತೆ ಒಟ್ಟು 12 ಜನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಉಳಿದ 25ಕ್ಕೂ ಹೆಚ್ಚು ಇಲಾಖೆಗಳ ಕಾರ್ಯ ನಿರ್ವಹಣೆ ಇನ್ನು ಅಳ್ನಾವರ ತಾಲೂಕಿನಿಂದ ಆರಂಭಗೊಂಡಿಲ್ಲ. ಬದಲಿಗೆ ಧಾರವಾಡದಿಂದಲೇ ಇಲಾಖಾ ಪ್ರಗತಿ ಪರಿಶೀಲನೆ, ಅಭಿವೃದ್ಧಿ ಚರ್ಚೆ, ನ್ಯೂನತೆ ಪರಿಹಾರಗಳು ನಿರ್ಧಾರವಾಗುತ್ತಿವೆ. ಈವರೆಗೂ ಅನುದಾನ ಬಂದಿಲ್ಲ. ತಾತ್ಕಾಲಿಕವಾಗಿ ಆಡಳಿತ ನಡೆಸಲು ಅಗತ್ಯವಿರುವ ಕಾರು,ಪ್ರಯಾಣ ಭತ್ಯೆ ಸೇರಿದಂತೆ ಮೂಲಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಎಪಿಎಂಸಿ ಆವರಣದಲ್ಲಿ ಹೊಸ ತಾಲೂಕು ಕಚೇರಿ ನಿರ್ಮಾಣವಾಗಬೇಕಿದ್ದು, ಅದಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಮಿಲ್‌ ಕಟ್ಟಡದಲ್ಲಿ ಅಣ್ಣಿಗೇರಿ ತಾಲೂಕು: ಪಂಪನ ಊರು ಅಣ್ಣಿಗೇರಿಯಾಗಿದ್ದು, ಹೊಸ ತಾಲೂಕು ರಚನೆಯಾದಾಗ ಗ್ರಾಮಸ್ಥರು ಅತ್ಯಂತ ಖುಷಿಪಟ್ಟಿದ್ದರು. ಆದರೆ ಅಂಗನವಾಡಿಗಳಂತೆ ಅಣ್ಣಿಗೇರಿ ತಾಲೂಕು ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ನವಲಗುಂದ ಪಟ್ಟಣಕ್ಕೆ ಹೋಗುವ ಬದಲು ಸುತ್ತಲಿನ ಗ್ರಾಮಗಳೆಲ್ಲವೂ ಇಲ್ಲಿಯೇ ತಮ್ಮೂರಿನ ಕೆಲಸಗಳು ಆಗುತ್ತವೆ ಎನ್ನುವ ಕನಸು ಕಂಡಿದ್ದರು.

Advertisement

ಆದರೆ ನೂತನ ತಾಲೂಕು ಕಚೇರಿಯ ಎಲ್ಲಾ ಇಲಾಖೆಗಳು ಇನ್ನು ಇಲ್ಲಿಗೆ ಬಂದಿಲ್ಲ. ತಹಶೀಲ್ದಾರ್‌ ಸೇರಿ 10 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 4 ಎಕರೆ ಜಮೀನಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದಿವೆ. ಕಂದಾಯ, ಖಜಾನೆ ಹೊರತು ಪಡಿಸಿ ಇನ್ನುಳಿದ 25ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಮತ್ತು ಸಿಬ್ಬಂದಿ ಇನ್ನು ಅಣ್ಣಿಗೇರಿ ತಲುಪಿಲ್ಲ. ಅಣ್ಣಿಗೇರಿ ಮತ್ತು ಇಂದಿರಾ ನಗರ ಮಧ್ಯೆ ಅಂದರೆ ಅಣ್ಣಿಗೇರಿಯಿಂದ 1.5 ಕಿ.ಮೀ.ದೂರದಲ್ಲಿ ಬಾಡಿಗೆ ಕಟ್ಟಡ ವೆಂಕಟೇಶ್ವರ ಮಿಲ್‌ನಲ್ಲಿ ಸದ್ಯಕ್ಕೆ ತಾಲೂಕು ಕಚೇರಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇನ್ನುಳಿದಂತೆ ತಾತ್ಕಾಲಿಕವಾಗಿ ವಾಹನ ವ್ಯವಸ್ಥೆ, ಸಿಬ್ಬಂದಿ ಮತ್ತು ಕಾರ್ಯ ನಿರ್ವಹಣೆ ಖರ್ಚು ವೆಚ್ಚದ ವ್ಯವಸ್ಥೆಯನ್ನು ಮಾತ್ರ ಜಿಲ್ಲಾಡಳಿತ ನಿರ್ವಹಿಸುತ್ತಿದೆ.

ಉ.ಕ.ದಲ್ಲಿಯೇ ದೊಡ್ಡದು ಹುಬ್ಬಳ್ಳಿ ನಗರ ತಾಲೂಕು : ಸ್ಮಾರ್ಟ್‌ ಸಿಟಿಯಂತೆ ಕಂಗೊಳಿಸುವ ಹುಬ್ಬಳ್ಳಿ ನಗರ ನೂತನ ತಾಲೂಕು ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲೂಕಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 67 ವಾರ್ಡುಗಳನ್ನು ಈ ತಾಲೂಕು ಒಳಗೊಂಡಿದ್ದು, 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪ್ರತ್ಯೇಕ ನೂತನ ಕಟ್ಟಡಕ್ಕೆ ಆರಂಭದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರೂ, ಈಗಿರುವ ಮಿನಿ ವಿಧಾನಸೌಧದಲ್ಲಿಯೇ ಕಚೇರಿಗಳು ಚೆನ್ನಾಗಿ ನಡೆಯುತ್ತಿದ್ದು, ಜನಪ್ರತಿನಿಧಿಗಳು ಕೂಡ ಇಲ್ಲಿಯೇ ಆಡಳಿತ ಕಚೇರಿ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಾಗಿದೆ. ಇನ್ನುಳಿದಂತೆ ಮೂರು ವಿಧಾನಸಭಾ ಕ್ಷೇತ್ರವ್ಯಾಪ್ತಿ ಇರುವುದರಿಂದ ತಾಲೂಕು ಆಡಳಿತ ನಡೆಸಲು ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದು, ಸರ್ಕಾರಕ್ಕೆ ಈ ಕುರಿತು ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಳ್ನಾವರ ತಾಲೂಕಿನ ಆಡಳಿತ ನಡೆಸಲು ತಾತ್ಕಾಲಿಕ ಸೌಲಭ್ಯಗಳು ಲಭಿಸಿವೆ. ಕಂದಾಯ,ಖಜಾನೆ ಇಲಾಖೆ ಕಚೇರಿಗಳು ಆರಂಭಗೊಂಡಿದ್ದು, ಇನ್ನುಳಿದ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳಬೇಕಿದೆ.  –ಅಮರೇಶ ಪಮ್ಮಾರ, ಅಳ್ನಾವರ ತಾಲೂಕು ತಹಶೀಲ್ದಾರ್‌

ಸದ್ಯಕ್ಕೆ ತಾಲೂಕು ಕಚೇರಿಗೆ ಸ್ವಂತ ಕಟ್ಟಡವಿಲ್ಲ. ವೆಂಕಟೇಶ್ವರ ಮಿಲ್‌ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಸರ್ಕಾರಕ್ಕೆ ಹೊಸ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.  ಮಂಜುನಾಥ ಅಮಾಸೆ, ಅಣ್ಣಿಗೇರಿ ತಹಶೀಲ್ದಾರ್‌

ಜನಸಂಖ್ಯೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಹುಬ್ಬಳ್ಳಿ ನಗರ ತಾಲೂಕು ಅವಳಿ ನಗರ ವ್ಯಾಪ್ತಿ ಹೊಂದಿದ್ದು, ಆಡಳಿತ ಅಭಿವೃದ್ಧಿ ದೃಷ್ಟಿಯಿಂದ ಇನ್ನಷ್ಟು ಸೌಲಭ್ಯಗಳು ಲಭಿಸಿದರೆ ಸೂಕ್ತ.  ಶಶಿಧರ್‌ ಮಾಡಿಯಾಳ, ಹುಬ್ಬಳ್ಳಿ ನಗರ ತಾಲೂಕು ತಹಶೀಲ್ದಾರ್‌             

ಡಾ|ಬಸವರಾಜ ಹೊಂಗಲ್‌

 

Advertisement

Udayavani is now on Telegram. Click here to join our channel and stay updated with the latest news.

Next