Advertisement

ಹೊರಸಿನ ಮೇಲೆ ಅನ್ನದಾತನ ಜೀವದ ಸೆಣಸು; ಹೊಲಕ್ಕೆ ಹೋಗಲು ನದಿಯೇ ಅಡ್ಡಿ

03:45 AM Apr 06, 2017 | |

ಬೀದರ: ಆಕಾಶಕ್ಕೆ ಏಣಿ ಹಾಕುವ ಹಂತಕ್ಕೆ ತಂತ್ರಜ್ಞಾನ ಮುಂದುವರಿದರೂ ಗಡಿ ಜಿಲ್ಲೆ ಬೀದರ್‌ನ ಕುಗ್ರಾಮ ಮರಕುಂದಾ ಗ್ರಾಮಸ್ಥರ ಬವಣೆ ಮಾತ್ರ ತಪ್ಪಿಲ್ಲ. ನದಿ ದಾಟಲು ಸೇತುವೆಯಿಲ್ಲದೆ ಹರಸಾಹಸ ಪಡುತ್ತಿರುವ ಈ ಗ್ರಾಮಸ್ಥರಿಗೆ ಹಗ್ಗದ ಮಂಚವೇ (ಹೊರಸು) ಆಸರೆ. ಸ್ವಲ್ಪ ಆಯ ತಪ್ಪಿದರೂ ನೀರುಪಾಲು ನಿಶ್ಚಿತ!

Advertisement

ಕಾರಂಜಾ ನದಿ ದಡದಲ್ಲಿರುವ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮರಕುಂದಾ ಗ್ರಾಮದ ರೈತರು, ನಿತ್ಯ ಇಂಥ ಅಪಾಯಕಾರಿ ಸ್ಥಿತಿಯಲ್ಲಿ ನದಿ ದಾಟಿ ಹೊಲ ಸೇರಬೇಕಿದೆ. ಕಾರಂಜಾ ಜಲಾಶಯದಲ್ಲಿ ಹಿನ್ನೀರು ಹೆಚ್ಚಿದಾಗೆಲ್ಲ ಮರಕುಂದಾ ಗ್ರಾಮಸ್ಥರಿಗೆ ಕಷ್ಟ ತಪ್ಪಿದ್ದಲ್ಲ. ಗ್ರಾಮದ ಹಿಂಭಾಗದಲ್ಲಿ ಜಮೀನು ಹೊಂದಿದ ರೈತರಿಗೆ ಜೀವ ಜಲವೇ ಈಗ ಸಂಕಷ್ಟ ತಂದೊಡ್ಡಿದೆ.

ನಿತ್ಯದ ಸರ್ಕಸ್‌:
ಮೂವತ್ತು ಮೀಟರ್‌ಗಿಂತ ಅಧಿಧಿಕ ಅಂತರ ಹೊಂದಿರುವ ನದಿಯಲ್ಲಿ ಹತ್ತು ಅಡಿಗಿಂತ ಹೆಚ್ಚು ಆಳದ ನೀರು ನಿಂತಿದೆ. ನದಿಯಾಚೆಗೆ ಗ್ರಾಮದ 30ಕ್ಕೂ ಹೆಚ್ಚು ರೈತರ 500 ಎಕರೆ ಜಮೀನಿದೆ. 100-150 ಮೀಟರ್‌ ಹೆಜ್ಜೆ ಹಾಕಿದರೆ ಹೊಲಗಳಿಗೆ ಹೋಗಬಹುದು. ಆದರೆ, ನೀರು ಅಡ್ಡಿಯಾಗಿದೆ. ಇದಕ್ಕಾಗಿ ರೈತರು ಟ್ಯೂಬ್‌, ಕಟ್ಟಿಗೆ, ಹಗ್ಗದ ಆಸರೆಯಲ್ಲಿ ನದಿಯಾಚೆಗೆ ತೆರಳುವ ಮಾರ್ಗ ಕಂಡುಕೊಂಡಿದ್ದಾರೆ. ನಿತ್ಯವೂ ಜೀವ ಕೈಯಲ್ಲಿ ಹಿಡಿದು ದಡ ಸೇರುತ್ತಿದ್ದಾರೆ.

ಪ್ರತಿದಿನ ಮಹಿಳೆಯರು, ಮಕ್ಕಳೂ ಕೂಡ ಹೊಲಕ್ಕೆ ಹೀಗೆಯೇ ಹೋಗಬೇಕು. ಆಸರೆಯಾಗಿರುವ ಟ್ಯೂಬ್‌ ಅಥವಾ ಹಗ್ಗ ಕೈಕೊಟ್ಟರೆ ದೇವರೇ ಗತಿ. ಇನ್ನೂ ಜಾನುವಾರುಗಳು ಈಜಿಕೊಂಡೇ ಬರಬೇಕು.

ನದಿಯೇ ಹತ್ತಿರದ ದಾರಿ:
ನದಿ ದಾಟುವ ತೊಂದರೆ ಬೇಡವಾದರೆ ಭಂಗೂರ, ಸಿಂದೋಲ್‌, ಪಾತರಪಳ್ಳಿ ಅಥವಾ ಬಗದಲ್‌ ಮೂಲಕ ಸುಮಾರು 12 ರಿಂದ 15 ಕಿಮೀ ಸುತ್ತು ಹಾಕಬೇಕು. ನೂರು ಮೀಟರ್‌ ಅಂತರದಲ್ಲಿರುವ ಜಮೀನುಗಳಿಗೆ ಇಷ್ಟು ದೂರ ಸುತ್ತು ಹಾಕುವ ಬದಲು ಕಷ್ಟವಾದರೂ ಸರಿ ನದಿ ದಾಟುವುದೇ ಉತ್ತಮ ಎನ್ನುತ್ತಾರೆ ರೈತರು.

Advertisement

ನೈಸ್‌ ಕಂಪನಿ ಮುಖ್ಯಸ್ಥ ಅಶೋಕ ಖೇಣಿ ಈ ಕ್ಷೇತ್ರವನ್ನು ಪ್ರತಿನಿಧಿಧಿಸುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ಭರವಸೆ ಹೊತ್ತಿದ್ದ ಈ ಭಾಗದ ಜನರಿಗೆ ನಿರಾಶೆಯಾಗಿದೆ. ಪ್ರಯಾಣಿಸಲು ಉತ್ತಮ ರಸ್ತೆ, ಸೇತುವೆಗಳಂಥ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಜನರ ಗೋಳು ಕೇಳಬೇಕಾದ ಸರ್ಕಾರ ಜಾಣಕುರುಡನಂತೆ ವರ್ತಿಸುತ್ತಿದೆ. ಯಾವುದೇ ಸರ್ಕಾರ ಇರಲಿ ಅಥವಾ ಯಾರೇ ಶಾಸಕರಾಗಲಿ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಶಾಶ್ವತ ಪರಿಹಾರ ರೂಪಿಸಿ
ಕಾರಂಜಾದಲ್ಲಿ ಹೆಚ್ಚಿನ ನೀರು ಇರುವ ವರೆಗೆ ಹಿನ್ನೀರಿನ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯವರೆಗೆ ಜಮೀನುಗಳಿಗೆ ಹೋಗಲು ಪರದಾಡಲೇಬೇಕು. ಟ್ಯೂಬ್‌, ಹಗ್ಗ ಸದ್ಯಕ್ಕೆ ಆಸರೆಗಿದೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಇಲ್ಲಿ ಸಣ್ಣ ಸೇತುವೆ ಅಥವಾ ಬ್ಯಾರೇಜ್‌ ಕಟ್ಟಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಶಾಸಕರು ಇತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು.
– ವೀರಶೆಟ್ಟಿ ಮಾಲಿಪಾಟೀಲ, ರೈತ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next