Advertisement

ಅನ್ನದಾತನ ಬೆಳೆವಿಮೆ ಹಣ ಹೇರಾಫೇರಿ

03:03 PM Jun 28, 2017 | Team Udayavani |

ಧಾರವಾಡ: ಎರಡು ವರ್ಷಗಳ ಬರಗಾಲ ಮತ್ತು ಈ ವರ್ಷದ ದುರ್ಬಲ ಮುಂಗಾರಿನಿಂದ ಮಳೆಗಾಗಿ ಕಾಯುತ್ತ ಕುಳಿತ ರೈತರನ್ನು ಕಳೆದ ವರ್ಷದ ಬೆಳೆವಿಮೆ ಹಣ ಸರಿಯಾಗಿ ತಲುಪದೇ ಇರುವುದು ಚಿಂತೆಗೀಡು ಮಾಡಿದೆ. 2016ರ ಮುಂಗಾರು ಬೆಳೆಗೆ ಇರಿಸಿದ್ದ ಬೆಳೆವಿಮೆ ನೀಡುವಲ್ಲಿ ಆಗಿರುವ ಪ್ರಮಾದಗಳು ತೀವ್ರ ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಬೆಳೆವಿಮೆ ನೀಡಲು ಬಳಕೆ ಮಾಡುವ ಮಾನದಂಡ ಕುರಿತು ಜಿಲ್ಲೆಯ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

Advertisement

ಎರಡು ಗ್ರಾಪಂಗಳು ಅಕ್ಕಪಕ್ಕ ಇದ್ದರೂ, ಒಂದು ಗ್ರಾಪಂ ವ್ಯಾಪ್ತಿಯ ಹೊಲದಲ್ಲಿ ನಷ್ಟವಾದ ಬೆಳೆಗೆ ನೀಡುವ ಬೆಳೆವಿಮೆ ಹೆಕ್ಟೇರ್‌ಗೆ 40 ಸಾವಿರ ರೂ., ಆದರೆ ಅದರ ಪಕ್ಕದ ಗ್ರಾಪಂನಲ್ಲಿ ಅದೇ ಹೊಲಗಳಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಹೆಕ್ಟೇರ್‌ಗೆ 15 ಸಾವಿರ ರೂ. ಸಿಗುತ್ತಿದೆ. ಅಷ್ಟೇ ಖರ್ಚು, ಅಷ್ಟೇ ಮಳೆ, ಅಷ್ಟೇ ಹಾನಿ ಮತ್ತು ಅಷ್ಟೇ ಶ್ರಮ ಹಾಕಿ ದುಡಿದ ರೈತರಿಗೆ ಇದೀಗ ಬೆಳೆವಿಮೆಯಲ್ಲಿ ತಾರತಮ್ಯವಾಗಿದ್ದು, ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳೊಂದಿಗೆ ರೈತರು ಜಗಳಕ್ಕಿಳಿದಿದ್ದಾರೆ.

ತಪ್ಪಿಲ್ಲ ಗೋಳು: ಈ ಮುನ್ನ ಪ್ರತಿ ಹೋಬಳಿವಾರು  ಬೆಳೆನಷ್ಟ ಮತ್ತು ಮಾದರಿಯನ್ನು ಸಿದ್ಧಪಡಿಸಿ ಅದರ ಆಧಾರದ ಮೇಲೆ ವಿಮೆ ನೀಡಲಾಗುತ್ತಿತ್ತು. ಆದರೆ ಇದರಲ್ಲಿ ಸಾಕಷ್ಟು ಲೋಪಗಳು ಉಂಟಾಗಿದ್ದರಿಂದ ಗ್ರಾ.ಪಂ. ಮಟ್ಟದಲ್ಲಿ ಬೆಳೆ ಆಣೆವಾರಿ(ಲೆಕ್ಕಾಚಾರ) ಮಾಡಲಾಗುತ್ತಿದೆ.

ಆದರೂ 2016ರ ಮುಂಗಾರಿನ ಆಣೆವಾರಿ ಜಿಲ್ಲೆಯಲ್ಲಿ ತೀವ್ರ ಏರುಪೇರಾಗಿದ್ದರಿಂದ ಗ್ರಾಪಂಗಳ ಮಧ್ಯೆ ತೀವ್ರ ತಾರತಮ್ಯ ಉಂಟಾಗಿದೆ. ಬೆಳೆವಿಮೆ ಮಂಜೂರು ಮಾಡುವಾಗ ಒಟ್ಟು ಏಳು ವರ್ಷಗಳ ಬೆಳೆ ಪ್ರಮಾಣ ತೆಗೆದುಕೊಂಡು ಅದರಲ್ಲಿ ತೀವ್ರ ಬರಗಾಲಕ್ಕೆ ತುತ್ತಾದ ಎರಡು ವರ್ಷಗಳನ್ನು ಕೈ ಬಿಟ್ಟು ಉಳಿದ ವರ್ಷಗಳ ಫಸಲಿನ ಪ್ರಮಾಣವನ್ನು ಗಣನೆ ಮಾಡಿದ ಸರಾಸರಿ ತೆಗೆದು ವಿಮೆ ಮಂಜೂರು ಮಾಡಲಾಗುತ್ತಿದೆ.

ಇದೀಗ ಈ ವ್ಯವಸ್ಥೆ ಹೋಬಳಿ ಮಟ್ಟದಿಂದ ಗ್ರಾಪಂಗೆ ಬಂದಿದ್ದು, ಗ್ರಾಪಂ ಮಟ್ಟದಲ್ಲಿ ಬೆಳೆ ಆಣೆವಾರಿ ಆಗಬೇಕು ಎಂಬ ನಿಯಮ ತರಲಾಗಿದೆ. ಅದೇ ಪ್ರಕಾರವೇ ಆಣೆವಾರಿಯಾಗಿದ್ದರೂ, ಹಾನಿಗೆ ತಕ್ಕಂತೆ ಬೆಳೆವಿಮೆಪ್ರಮಾಣ ಸಿಗದೇ ಹೋಗಿದೆ ಎಂಬುದು ರೈತರ  ಆರೋಪ.

Advertisement

ವಿಮೆ ಹೇರಾಫೇರಿ: ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಭತ್ತ ಬೆಳೆದ ರೈತರು ಧಾರವಾಡ ತಾಲೂಕಿನ ಪಶ್ಚಿಮ ಭಾಗ ಮತ್ತು ಕಲಘಟಗಿ ತಾಲೂಕಿನಲ್ಲಿ ಹೆಚ್ಚಿದ್ದಾರೆ. ಒಟ್ಟು 11,849 ಜನ ರೈತರು 10,954 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ಈ ಸಂಬಂಧ 1.11 ಕೋಟಿ ರೂ. ಹಣವನ್ನು ರೈತರು ಭತ್ತಕ್ಕೆ ಬೆಳೆವಿಮೆ ಇರಿಸಿದ್ದರು.

ಇದಕ್ಕೆ 55.86 ಕೋಟಿ.ರೂ. ಬೆಳೆವಿಮೆ ಮಂಜೂರಾಗಿದೆ. ಆದರೆ ಕೆಲವು ಗ್ರಾಪಂಗಳಿಗೆ ಹೆಕ್ಟೇರ್‌ಗೆ 40 ಸಾವಿರ ರೂ. ಕೊಟ್ಟರೆ, ಇನ್ನಷ್ಟಕ್ಕೆ 20, 14, 13 ಸಾವಿರ ರೂ. ನೀಡಲಾಗಿದೆ. ಆದರೆ ಬೆಳೆನಷ್ಟ ಮಾತ್ರ ಸಮಪ್ರಮಾಣದಲ್ಲಿಯೇ ಆಗಿದೆ. ಇನ್ನು ಮಳೆಯಾಶ್ರಿತವಾಗಿ ಶೇಂಗಾ ಬೆಳೆದ ರೈತರ ಗೋಳು ಕೂಡ ಇದಕ್ಕೆ ಹೊರತಾಗಿಲ್ಲ.

4965 ರೈತರು 6023 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆದಿದ್ದರು. ಶೇ.77ರಷ್ಟು ನಷ್ಟವಾಗಿದ್ದರಿಂದ ಪ್ರತಿ ಹೆಕ್ಟೇರ್‌ಗೆ 33,986 ರೂ. ಬೆಳೆವಿಮೆ ಮಂಜೂರಾಗಿದೆ. ಇನ್ನು ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಕೂಡ ರೈತರ ಕಣ್ಣಲ್ಲಿ ನೀರು ತರಿಸುತ್ತಿದ್ದು, 17471 ರೈತರು 12323 ಹೆಕ್ಟೆರ್‌ನಲ್ಲಿ ಬಿತ್ತನೆ ಮಾಡಿದ್ದರು.

ಇದು ಶೇ.19 ರಷ್ಟು ನಷ್ಟವಾಗಿ, ಪ್ರತಿ ಹೆ.13973 ರೂ. ಗಳಷ್ಟು ಹಣ ವಿಮೆ ಮಂಜೂರಾಗಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಗೋವಿನಜೋಳ, ಹೆಸರು, ಆಲೂಗಡ್ಡೆಯ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಹೀಗಾಗಿ ಆಣೆವಾರಿ ಪದ್ಧತಿಯನ್ನೇ ಬದಲಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.  

* ಬಸವರಾಜ ಹೊಂಗಲ್‌ 

Advertisement

Udayavani is now on Telegram. Click here to join our channel and stay updated with the latest news.

Next