ಪುಣೆ:ಕೇಂದ್ರ ಸರ್ಕಾರ ಜಾರಿಗೆ ತಂದು ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬ ರೈತರ ಬೇಡಿಕೆಯನ್ನು ಒಂದು ವೇಳೆ ಕೇಂದ್ರ ಸರ್ಕಾರ ಈಡೇರಿಸದಿದ್ದರೆ 2021ರ ಜನವರಿಯಲ್ಲಿ ಚಳವಳಿ ಹಮ್ಮಿಕೊಳ್ಳುವುದಾಗಿ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರ ನಿಗ್ರಹ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.
ರಾಲೇಗಣ್ ಸಿದ್ದಿಯಲ್ಲಿರುವ ಅಣ್ಣಾ ಹಜಾರೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ, 2021ರ ಜನವರಿಯಲ್ಲಿ ಮತ್ತೆ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಆದರೆ ಸತ್ಯಾಗ್ರಹ ಆರಂಭಿಸುವ ಕುರಿತು ಪ್ರಕಟಣೆಯಲ್ಲಿ ಖಚಿತ ದಿನಾಂಕವನ್ನು ಉಲ್ಲೇಖಿಸಿಲ್ಲ. ನಾನು ರೈತರ ಪರವಾಗಿ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ರೈತರ ಬೇಡಿಕೆ ಈಡೇರಿಗಾಗಿ ಮೊದಲು ದೆಹಲಿಯ ರಾಮ ಲೀಲಾ ಮೈದಾನದಲ್ಲಿ 2018ರ ಮಾರ್ಚ್ 21ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದೆ. ನಂತರ 7ನೇ ದಿನ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದರು ಎಂದು ಹಜಾರೆ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಅಂದು ಭೇಟಿಯಾಗಿದ್ದ ಸಚಿವರು, ಮುಖ್ಯಮಂತ್ರಿ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರಿಲ್ಲ. ಅದರ ಪರಿಣಾಮ 2019ರ ಜನವರಿ 30ರಂದು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೆ. ಆ ಸಂದರ್ಭದಲ್ಲಿಯೂ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್, ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಭಾಮ್ರೆ ಮತ್ತು ಫಡ್ನವೀಸ್ ಅವರು ಭರವಸೆ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರಿಲ್ಲ ಎಂದು ಆರೋಪಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ನಾನು ದೆಹಲಿಯಲ್ಲಿ ಹೊಸ ವರ್ಷದ ಜನವರಿ ತಿಂಗಳಿನಲ್ಲಿ ಮತ್ತೆ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಅಣ್ಣಾ ಹಜಾರೆ ತಿಳಿಸಿದ್ದು, ಈ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.