ಅಂಕೋಲಾ : ಇಲ್ಲಿನ ಸಾರ್ವಜನಿಕ ಲೈಬ್ರರಿ ಬಳಿ ರಾತ್ರಿ 8 ಗಂಟೆಯ ಸುಮಾರಿಗೆ ವಿದ್ಯುತ್ ತಂತಿಯೊಂದು ಏಕಾಏಕಿ ತುಂಡಾಗಿ ಬಿದ್ದಿದೆ. ಈ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಸಂಚರಿಸುತ್ತಿದ್ದರು. ಲೈಬ್ರರಿ ಬಳಿ ಹೂವಿನ ಅಂಗಡಿಗಳಿಗೆ ಹೊಂದಿಕೊಂಡ ಕಂಬದಿಂದ ಜೈಹಿಂದ್ ಲಾಡ್ಜ್ ರಸ್ತೆಯ ವಿದ್ಯುತ್ ಕಂಬಕ್ಕೆ ಜೋಡಿಸಿದ್ದ ಲೈನ್ ಇದಾಗಿದ್ದು ವಿದ್ಯುತ್ ಪ್ರವಹಿಸುತ್ತಿರುವಾಗಲೇ ತುಂಡಾಗಿದೆ. ಆದರೆ ಈ ತಂತಿಗೆ ಸುತ್ತಿಕೊಂಡಿದ್ದ ಸರ್ವಿಸ್ ವೈರ್ ಇದ್ದುದರ ಪರಿಣಾಮ ತುಂಡಾದ ತಂತಿ ಪೂರ್ತಿ ನೆಲಕ್ಕೆ ಬೀಳದೆ ಐದಾರು ಅಡಿ ಮೇಲೆಯೇ ಜೋಲುವಂತಾಯಿತು.
ಸ್ಥಳದಲ್ಲಿದ್ದವರು ಬೊಬ್ಬೆ ಹೊಡೆದು ಜನರನ್ನು ಚದುರಿಸಿದರು. ತಂತಿಯ ಕೆಳಗಡೆ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದು ವೇಳೆ ತಂತಿ ನೆಲಕ್ಕೆ ಬಿದ್ದರೆ ಭಾರೀ ಅನಾಹುತ ಆಗುವದರಲ್ಲಿತ್ತು. ಹೂವಿನಂಗಡಿ ಪಕ್ಕದ ಕಂಬದಲ್ಲಿ ಬುಧವಾರ ಬೆಳಗ್ಗೆಯೇ ದುರಸ್ತಿ ಕಾರ್ಯವೂ ನಡೆದಿತ್ತು. ಆದರೆ ಈ ತಂತಿ ಗಮನಕ್ಕೆ ಬಂದಿರಲಿಲ್ಲವಾಗಿರಬಹುದು. ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನಾದರೂ ಇಲಾಖೆ ಸೂಕ್ಷ್ಮವಾಗಿ ಪರೀಕ್ಷಿಸಿ ಹಳೆಯ ತುಂಡಾಗುವ ಸ್ಥಿತಿಯಲ್ಲಿರುವ ತಂತಿಗಳನ್ನು ಬದಲಿಸಬೇಕಾಗಿದೆ.