ಉದಯವಾಣಿ ಸಮಾಚಾರ
ಅಂಕೋಲಾ: ಉತ್ತರಕನ್ನಡದ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಇನ್ನೊಂದು ದಡದಲ್ಲೂ ಭಾರೀ ಅನಾಹುತವೇ ಸಂಭವಿಸಿದೆ. ಮನೆಗಳು ಕುರುಹಿಲ್ಲದಂತೆ ನೆಲಸಮವಾಗಿವೆ. ಜೀವನೋಪಾಯಕ್ಕೆ ಸಾಥಿಯಾಗಿದ್ದ ದೋಣಿಗಳೂ ನಾಶವಾಗಿವೆ. ಜನರ ಬದುಕಿನ ಬುಡವೇ ಅಲುಗಾಡಿದೆ.
ನಿಜ. ಈ ಗುಡ್ಡ ಕುಸಿತದಿಂದ ಶಿರೂರು ಉಳುವರೆ ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಎಲ್ಲಿ ನೋಡಿದರೂ ಗುಡ್ಡದ ಮಣ್ಣಿನಡಿ ಮತ್ತು ಗಂಗಾವಳಿ ನೀರಿಗೆ ಸಿಲುಕಿ ಧ್ವಂಸಗೊಂಡಿರುವ ವಸ್ತುಗಳೇ ಕಾಣಿಸುತ್ತಿವೆ. ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಸುಮಾರು ಏಳು ಮನೆಗಳು ನೆಲಕಚ್ಚಿವೆ. 27ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ.
ಉಳುವರೆ ಗ್ರಾಮದ ಮಡುಕುಣಿ ಗೌಡರಕೊಪ್ಪ ಮತ್ತು ಅಂಬಿಗರ ಕೊಪ್ಪವಂತೂ ನೀರಿಗೆ ಆಪೋಶನವಾಗಿದೆ. ಇಲ್ಲಿಯ ಕೃಷಿ ಜಮೀನು, ನೂರಾರು ತೆಂಗಿನ ಮರ ಸೇರಿದಂತೆ ಗುಡ್ಡದಿಂದ ಜಾರಿ ಬಂದಿರುವ ಮರಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಜನವಸತಿ ಪ್ರದೇಶ ಮತ್ತು ಮನೆಗಳಿಗೆ ಅಪ್ಪಳಿಸಿವೆ. ಇದರಿಂದ ಮನೆಗಳಿಗೂ ಹಾನಿ ಉಂಟಾಗಿದೆ.
ಎಲ್ಲ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅನೇಕ ಮನೆಗಳೂ ಬೀಳುವ ಸ್ಥಿತಿಯಲ್ಲಿವೆ. ಅಂಬಿಗರ ಕೊಪ್ಪದಲ್ಲಂತೂ ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಸುಮಾರು 50ಕ್ಕೂ ಹೆಚ್ಚು ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಛಿದ್ರ-ಛಿದ್ರವಾಗಿವೆ.
ತಾಯಿಗಾಗಿ ಹುಡುಕಾಟ: ಇನ್ನು ಗೌಡರ ಕೊಪ್ಪದಲ್ಲಿ ಏಳು ಮನೆಗಳು ಸಂಪೂರ್ಣ ನೆಲಸಮವಾಗಿವೆ. ಎಲ್ಲೆಡೆ ಗುಡ್ಡದ ಮಣ್ಣು ತುಂಬಿಹೋಗಿದೆ. ಇಲ್ಲಿನ ಸಣ್ಣು ಗೌಡ (55) ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗುವ ವೇಳೆ ಅವರು ಉಟ್ಟಿದ್ದ ಸೀರೆ ಒಂದು ಬದಿಯಲ್ಲಿ ಬಿದ್ದಿದ್ದು ಅವರ ಮಗ ಮಂಜುನಾಥ ಹನುಮಂತ ಗೌಡ ಅದನ್ನು ಹಿಡಿದುಕೊಂಡು ತಾಯಿಗಾಗಿ ಹುಡುಕಾಟ ನಡೆಸುತ್ತಿರುವುದು ಮನ ಕಲಕಿಸುತ್ತಿದೆ.
ಆಭರಣ ಮಣ್ಣುಪಾಲು: ಗೌಡರ ಕೊಪ್ಪದ ನಿವಾಸಿ ನೀಲಾ ಮುದ್ದು ಗೌಡ ಅವರು ಪುತ್ರಿ ದಿವ್ಯಾಳ ಮದುವೆಗೆಂದು ನಾಲ್ಕು ಲಕ್ಷ ರೂ. ಮೌಲ್ಯದ ಆಭರಣ ಮಾಡಿಸಿಟ್ಟಿದ್ದರು. ಜತೆಗೆ ಒಂದಷ್ಟು ಹಣವನ್ನೂ ಕೂಡಿಟ್ಟಿದ್ದರು. ಎಲ್ಲವೂ ಈಗ ಗುಡ್ಡದ ಮಣ್ಣು ಪಾಲಾಗಿದೆ. ಈ ಮನೆಯವರು ಕೂಡ ಆಭರಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬದುಕು ಕಸಿದ ದುರಂತ: ಗುಡ್ಡ ಕುಸಿತ ದುರಂತ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದವರ ಬದುಕನ್ನೇ ಕಿತ್ತುಕೊಂಡಿದೆ. ಅಂಬಿಗರು ನಿತ್ಯ ದೋಣಿ ಮೂಲಕ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದರು. ಅಂತಹ ದೋಣಿಗಳು ಇಲ್ಲದಂತಾಗಿ ಭವಿಷ್ಯದ ಬದುಕಿಗೆ ಕತ್ತಲೆ ಕವಿದಿದೆ. ಅಲ್ಲದೇ ಮನೆಗಳಿಗೂ ಹಾನಿಯಾಗಿ ಜೀವನದ ಮೇಲೆ ಬರೆ ಎಳೆದಂತಾಗಿದೆ. ಗೌಡರಕೊಪ್ಪದವರು ನಿತ್ಯ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿ ಪುಟ್ಟ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಗುಡ್ಡ ಕುಸಿತ ಘಟನೆ ಇವರ ಜಂಘಾಬಲವನ್ನೇ ಉಡುಗಿಸಿದೆ. ಎಲ್ಲರೂ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಗುಡ್ಡ ಕುಸಿದು ದಿನವೇ ಕಳೆದರೂ ಉಳುವರೆ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಗಳು ಆಗಮಿಸಿಲ್ಲ. ಜನರಿಗೆ ಕಾಳಜಿ ಕೇಂದ್ರ ಮಾಡಲು ಯಾರೂ ಇಲ್ಲ. ಸ್ಥಳೀಯರೇ ಮತ್ತು ಪಂಚಾಯತಿ ಸದಸ್ಯರೇ ಸೇರಿ ಕಾಳಜಿ ಕೇಂದ್ರ ಮಾಡಿ ದಿನಸಿ ಸಾಮಾನು ತಂದು ಜನರನ್ನು ಸ್ಥಳಾಂತರಿಸಿದ್ದೇವೆ. ನಮಗಿಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು ಮುಂದೆ ಬರಬೇಕು.
-ಸಂತೋಷ ಅಂಬಿಗ
ಸ್ಥಳೀಯ ನಿವಾಸಿ
-ಅರುಣ ಶೆಟ್ಟಿ