ಹೊಸದಿಲ್ಲಿ: ಟೀಮ್ ಇಂಡಿಯಾ ಪಾಲಿಗೆ ದಕ್ಷಿಣ ಆಫ್ರಿಕಾ ಪ್ರವಾಸವೊಂದು ದೊಡ್ಡ ಸವಾಲು. ಅಲ್ಲಿನ ಬೌನ್ಸಿ ಟ್ರ್ಯಾಕ್‌ಗಳು, ಶಾರ್ಟ್‌ಪಿಚ್ ಎಸೆತಗಳೆಲ್ಲ ಸ್ಪಿನ್ ಪಿಚ್‌ಗಳಲ್ಲಿ ಆಡಿ ಮೆರೆದವರಿಗೆ ಕಗ್ಗಂಟಾಗುವುದು ಸಹಜ. ಇದಕ್ಕಿರುವ ಒಂದು ಪರಿಹಾರವೆಂದರೆ, ಮುಂಚಿನವಾಗಿ ತೆರಳಿ ಅಲ್ಲಿನ ಟ್ರ್ಯಾಕ್‌ಗಳಲ್ಲಿ ಕಠಿನ ಅಭ್ಯಾಸ ನಡೆಸುವುದು.
ಭಾರತದ ಟೆಸ್ಟ್ ಸ್ಪೆಷಲಿಸ್ಟ್‌ಗಳಿಗೆ ಈ ಬಾರಿ ಸಾಕಷ್ಟು ಮೊದಲೇ ಹರಿಣಗಳ ನಾಡಿಗೆ ತೆರಳಿ ಅಭ್ಯಾಸ ನಡೆಸಲು ಅವಕಾಶವಿದೆ. ಇವರಿಗೆ ಬೌಲಿಂಗ್ ನಡೆಸಲು ಭಾರತದಿಂದಲೇ ಕೆಲವು ಸೀಮರ್ ಹಾಗೂ ವೇಗದ ಬೌಲರ್‌ಗಳನ್ನು ಕರೆದೊಯ್ಯಲಾಗುವುದು. ಇದಕ್ಕಾಗಿ ಮೊಹಮ್ಮದ್ ಸಿರಾಜ್, ಆವೇಶ್ ಖಾನ್, ನವದೀಪ್ ಸೈನಿ ಮತ್ತು ಬಾಸಿಲ್ ಥಂಪಿ ಅವರನ್ನು ಆರಿಸಲಾಗಿತ್ತು. ಇದರಲ್ಲೀಗ ಸಣ್ಣ ಬದಲಾವಣೆಯೊಂದನ್ನು ಮಾಡಲಾಗಿದ್ದು, ಸೈನಿ ಬದಲು ಉತ್ತರ ಪ್ರದೇಶದ ಸೀಮರ್ ಅಂಕಿತ್ ರಜಪೂತ್ ಅವರಿಗೆ ಅವಕಾಶ ನೀಡಲಾಗಿದೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ, ಈಗ ಕೆಕೆಆರ್ ತಂಡದ ಸದಸ್ಯನಾಗಿರುವ ರಜಪೂತ್ ಭಾರತ “ಎ’ ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ತಮ್ಮ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರಜಪೂತ್ ಅವರೇ ಖಚಿತಪಡಿಸಿದ್ದಾರೆ.
“ನಿಜ, ನಾನು ನೆಟ್ ಬೌಲರ್ ಆಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದೇನೆ. ನವದೀಪ್ ಸೈನಿ ಹೋಗುತ್ತಿಲ್ಲ. ಅವರ ಬದಲು ನನಗೆ ಅವಕಾಶ ಸಿಕ್ಕಿದೆ. ವಿಭಿನ್ನ ವಾತಾವರಣದಲ್ಲಿ ನಮ್ಮ ದೇಶದ ದೊಡ್ಡ ಆಟಗಾರರಿಗೆ ಬೌಲಿಂಗ್ ನಡೆಸುವುದು ನಿಜಕ್ಕೂ ವಿಶೇಷ ಅನುಭವ. ಸದ್ಯ ನಾನು ಯಾವುದೇ ಯೋಜನೆ ಹಾಕಿಕೊಂಡಿಲ್ಲ. ನನಗೇನು ಸೂಚಿಸಲಾಗುತ್ತದೋ ಅದನ್ನು ಮಾಡುತ್ತೇನೆ, ಶ್ರೇಷ್ಠ ನಿರ್ವಹಣೆ ನೀಡುತ್ತೇನೆ…’ ಎಂದು ಟೀಮ್ ಇಂಡಿಯಾಕ್ಕೆ ಮೊದಲ ಸಲ ಅನಧಿಕೃತ ಕರೆ ಪಡೆದಿರುವ ಅಂಕಿತ್ ಹೇಳಿದ್ದಾರೆ.
ಪ್ರಸಕ್ತ ರಣಜಿ ಋತುವಿನಲ್ಲಿ 10 ಪಂದ್ಯಗಳಿಂದ 18 ವಿಕೆಟ್ ಕಿತ್ತ ಸಾಧನೆ ಅಂಕಿತ್ ರಜಪೂತ್ ಅವರದು.