Advertisement
ಅಂಜುಂ ಹುಟ್ಟಿದ್ದು ಮೇ 20, 1977 ನವದೆಹಲಿಯಲ್ಲಿ. ಬಾಲ್ಯದಿಂದಲೂ ಆ್ಯತ್ಲೆಟಿಕ್ಸ್, ಸ್ವಿಮ್ಮಿಂಗ್, ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಅಂಜುಂ ನ್ಯಾಶನಲ್ ಲೆವೆಲ್ ಬಾಸ್ಕೆಟ್‌ಬಾಲ್ ಪ್ಲೇಯರ್ ಕೂಡ ಹೌದು. ಇವರ ತಂದೆ ಕೃಷ್ಣನ್ ಬಾಲ್ ಚೋಪ್ರಾ ಒಬ್ಬ ಗಾಲ್ಫರ್ ಆಗಿದ್ದು, ಇವರ ತಾಯಿ ಪೂನಂ ಚೋಪ್ರಾ ಕಾರ್ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಸಹೋದರ ನಿರ್ವಾನ್ ಚೋಪ್ರಾ ನ್ಯಾಶನಲ್ ಲೆವೆಲ್ ಕ್ರಿಕೆಟರ್ ಆಗಿದ್ದರು. ಮನೆಯಲ್ಲಿದ್ದ ಈ ಕ್ರೀಡಾ ವಾತಾವರಣವೇ ಅವರನ್ನು ಕ್ರೀಡೆ ಎಡೆಗೆ ಸೆಳೆದಿದೆಂದರೆ ಅತಿಶಯೋಕ್ತಿಯಲ್ಲ. ಒಂಬತ್ತನೇ ವಯಸ್ಸಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅಂಜುಂ ಆರಂಭದಲ್ಲಿ ಶಾಲಾ ಕಾಲೇಜು ತಂಡಗಳನ್ನು ಪ್ರತಿನಿಧಿಸುತ್ತಿದ್ದರು ಮುಂದೆ ಅಂಡರ್ 15 ತಂಡದ ಪರವಾಗಿಯೂ ಆಡಲಿಳಿಯುತ್ತಾರೆ.
Related Articles
Advertisement
2002ರಲ್ಲಿ ಅಂಜುಂ ಅವರಿಗೆ ಭಾರತ ತಂಡದ ನಾಯಕತ್ವ ಲಭಿಸುತ್ತದೆ. ನಾಯಕಿಯಾಗಿ ಮೊದಲ ಟೆಸ್ಟ್ ಪಂದ್ಯ. ಎದುರಾಳಿ ಇಂಗ್ಲೆಂಡ್. ಆ ಪಂದ್ಯದಲ್ಲಿ ತಂಡದಲಿದ್ದ 7 ಜನ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಅನನುಭವಿ ಆಟಗಾರ್ತಿಯರು! ಇವರನ್ನು ಕಟ್ಟಿಕೊಂಡು ನಾಯಕತ್ವ ನಿಭಾಯಿಸುವ ಅಂಜುಂ ಎದುರಾಳಿ ತಂಡವನ್ನು ವೈಟ್‌ವಾಶ್ ಮಾಡಿ ಅಮೋಘ ಗೆಲುವು ದಾಖಲಿಸುತ್ತಾರೆ. ಮೊದಲ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಮ್ಮ ಚಾಣಾಕ್ಷ್ಯ ನಾಯಕತ್ವ ಹಾಗೂ ಬ್ಯಾಟಿಂಗ್ ಮೂಲಕ ಭಾರತಕ್ಕೆ ಮೊದಲ ಸಾಗರೋತ್ತರ ಟೆಸ್ಟ್ ಗೆಲುವನ್ನು ತಂದುಕೊಡುತ್ತಾರೆ.
ಅಂಜುಂ ಹೆಜ್ಜೆ ಗುರುತು
4 ಏಕದಿನ ಮತ್ತು 2 ಟಿ 20 ಸೇರಿ ಒಟ್ಟು 6 ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅಂಜುಂ 2005ರಲ್ಲಿ ಭಾರತ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್, ಬೌಲಿಂಗ್ ಜತೆ ಫೀಲ್ಡಿಂಗ್‌ನಲ್ಲಿಯೂ ಸೈ ಎನಿಸಿಕೊಂಡಿದ್ದ ಅಂಜುಮ್ ಭಾರತದ ಪರ 100 ಏಕದಿನ ಪಂದ್ಯವನ್ನಾಡಿದ ಹಾಗೂ ಏಕದಿನದಲ್ಲಿ 1,000 ಪೂರ್ತಿಗೊಳಿಸಿದ ಮೊದಲ ಆಟಗಾರ್ತಿ.
2012ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಅಂಜುಂ 17 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 12 ಟೆಸ್ಟ್ ಪಂದ್ಯಗಳನಾಡಿದ್ದು, 4 ಅರ್ಧ ಶತಕ ಸಹಿತ 548 ರನ್ ಬಾರಿಸಿದ್ದಾರೆ. 127 ಏಕದಿನ ಪಂದ್ಯಗಳಿಂದ 1 ಶತಕ, 18 ಅರ್ಧ ಶತಕ ಸಹಿತ 2,856 ರನ್ ರಾಶಿ ಹಾಕಿದ್ದು, 18 ಟಿ20ಗಳಿಂದ 241 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವವರ ಯಾದಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.
ರಾಜೀವ್ ಗಾಂಧಿ ಖೇಲ್‌ರತ್ನ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳಿಗೆ ಭಾಜನರಾಗಿರುವ ಅಂಜುಂ ಚೋಪ್ರಾ ವನಿತಾ ಕ್ರಿಕೆಟ್‌ಗೆ ನೀಡಿದ ಕೊಡುಗೆ ನಿಜಕ್ಕೂ ಸ್ಮರಣೀಯ.
-ಸುಶ್ಮಿತಾ ನೇರಳಕಟ್ಟೆ