ಗಂಗಾವತಿ: ಸರಕಾರದ ವಶದಲ್ಲಿರುವ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮುಸ್ಲಿಂ ಸಮಾಜದವರ ಅಂಗಡಿಗಳನ್ನು ತೆರವು ಮಾಡಿಸುವಂತೆ ಶ್ರೀರಾಮಸೇನೆ, ಸಂಘಪರಿವಾರದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದನ್ನು ಬಹುತ್ವ ಭಾರತ ಕರ್ನಾಟಕ ಸಂಘಟನೆ ಕಾರ್ಯಕರ್ತರು ಖಂಡಿಸಿ, ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ, ಪ್ರಸಿದ್ಧ ಯಾತ್ರಾ ಸ್ಥಳವಾದ ಅಂಜನಾದ್ರಿ ಬೆಟ್ಟದ ಹತ್ತಿರ ಮುಸ್ಲಿಂ ವ್ಯಾಪಾರಸ್ಥರನ್ನು ಕೋಮುವಾದಿ ಸಂಘಟನೆಗಳು ಹೊರಹಾಕಲು ಹುನ್ನಾರ ನಡೆಸಿರುವುದು ತೀವ್ರ ಖಂಡನೀಯವಾಗಿದೆ. ಜಿಲ್ಲಾಡಳಿತ ಸಂಘ ಪರಿವಾರದ ಮಾತಿಗೆ ಸೊಪ್ಪು ಹಾಕದೇ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮೂಲಕ ಅಹಿತಕರ ಘಟನೆ ಜರುಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಇದನ್ನೂ ಓದಿ : ಅಂಜನಾದ್ರಿ: ಹನುಮಜಯಂತಿ, ಮಾಲೆ ವಿಸರ್ಜನೆಗೆ ಸಕಲ ಸಿದ್ಧತೆ
ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಸರ್ವಧರ್ಮಗಳ ಸಮನ್ವಯದ ತೋಟವಾಗಿದೆ. ಭಾರತದ ಸಂವಿಧಾನದಲ್ಲಿ ಸರ್ವ ಧರ್ಮಗಳಿಗೂ ಮುಕ್ತ ಸ್ವಾತಂತ್ರ್ಯತೆ ಇದ್ದು, ಅಲ್ಲದೇ ವ್ಯಾಪಾರಕ್ಕಾಗಿ ಯಾವ ಧರ್ಮಗಳಿಗೂ ನಿರ್ಬಂಧ ಇರುವುದಿಲ್ಲ. ಹೀಗಿದ್ದರೂ ಶ್ರೀರಾಮಸೇನೆಯಂತಹ ಕೆಲವು ಕೋಮುವಾದಿ ಸಂಘಟನೆಗಳು ಮುಸ್ಲಿಂ ವ್ಯಾಪಾರಸ್ಥರನ್ನು ಹೊರಹಾಕಲು ಪ್ರಯತ್ನಿಸುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಕೂಡಲೇ ಎಲ್ಲರೂ ಒಂದಾಗಿ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳುವ ಮೂಲಕ ಸಂವಿಧಾನದ ರಕ್ಷಣೆ ಮುಂದಾಗಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಹುತ್ವ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಸಣ್ಣ ಹನುಮಂತಪ್ಪ ಹುಲಿಹೈದರ್ ಹಿರಿಯ ಪ್ರಗತಿಪರ ಚಿಂತಕ ಜೆ. ಭಾರಧ್ವಾಜ್, ಪರಶುರಾಮ, ಚಾಂದ್ ಪಾಷಾ, ಬುಡ್ಡಪ್ಪ, ಆಲಂ ಬಾಷಾ, ಆನಂದ, ನಾಗರಾಜ ಇದ್ದರು.