Advertisement
ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ತಿರುಮಲದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವೆಂದು ಅಭಿವೃದ್ಧಿ ಪಡಿಸಲು ನಡೆಸಿದ್ದ ಪ್ರಯತ್ನಕ್ಕೆ ಆಂಧ್ರಪ್ರದೇಶದ ವಿಜಯವಾಡ ಹೈಕೋರ್ಟ್ ತಡೆ ನೀಡಿದ್ದು, ಈಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈ ಬಗ್ಗೆ ಪೂರಕವಾದ ಪೌರಾಣಿಕ, ಐತಿಹಾಸಿ, ಪುರಾತತ್ವ ದಾಖಲೆಗಳನ್ನು ಸಂಗ್ರಹಿಸಲು ಮುಂದಡಿ ಇಟ್ಟಿದೆ.
ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿಯೇ ಎಂದು ಅಧಿಕೃತ ಘೋಷಣೆ ಮಾಡಲು ಬೇಕಿರುವ ಪೌರಾಣಿಕ ಮತ್ತು ಐತಿಹಾಸಿ ದಾಖಲೆಗಳ ಸಂಗ್ರಹಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆಯವರು, ರಾಜ್ಯದ ಆಗಮ ಪಂಡಿತರು, ಇತಿಹಾಸಕಾರರು, ಬೆಂಗಳೂರು ವಿವಿ ಕುಲಸಚಿವ ಡಾ. ಎಂ. ಕೊಟ್ರೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎಸ್. ಗೋವಿಂದ ಭಟ್ಟ, ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕೆರ್, ಹಂಪಿ ವಿವಿಯ ಇತಿಹಾಸ ವಿಭಾಗದ ಡಾ. ವಾಸುದೇವ್ ಬಡಿಗೇರ್, ಸಂಶೋಧಕ ಡಾ. ಸಿದ್ದಲಿಂಗಪ್ಪ ಹನುಮ ಜನ್ಮಭೂಮಿ ಟ್ರಸ್ಟ್ ಫೌಂಡರ್ ಟ್ರಸ್ಟಿ ಗೋವಿಂದನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ತಜ್ಞರು, ಆಗಮಿಕರು, ಇತಿಹಾಸ ಸಂಶೋಧಕರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಸಭೆ ನಡೆಸಲು ನಿರ್ಧಾರ:
ಹನುಮ ಜನ್ಮ ಸ್ಥಳದ ಬಗ್ಗೆ ತಿರುಮಲ ತಿರುಪತಿ ಟ್ರಸ್ಟ್ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟವನ್ನು ನಿಜವಾದ ಹನುಮ ಜನ್ಮ ಸ್ಥಳವೆಂದು ಘೋಷಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಅಲ್ಲದೇ ಇದು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುವುದರಿಂದ ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತಿಹಾಸ ತಜ್ಞರು, ಸಂಶೋಧಕರು, ಪಂಡಿತರ ಜೊತೆ ಅಧಿಕೃತ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಕಿಷ್ಕಿಂದಾ ಪ್ರಾಧಿಕಾರ ರಚನೆಗೆ ಸಲಹೆ:ಕಿಷ್ಕಿಂದಾ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವುದರಿಂದ ಕಿಷ್ಕಿಂದಾ ಅಭಿವೃದ್ಧಿ ಮಾಡಲು ಕಷ್ಟವಾಗಲಿದ್ದು, ಹಂಪಿ ಪ್ರಾಧಿಕಾರದಿಂದ ಕಿಷ್ಕಿಂದಾ ಪ್ರಾಧಿಕಾರವನ್ನು ಪ್ರತ್ಯೇಕ ರಚನೆ ಮಾಡಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರವಾಸಿ ಸ್ಥಳವಲ್ಲ, ತೀರ್ಥಕ್ಷೇತ್ರ:
ಕಿಷ್ಕಿಂದಾ ಅಂಜನಾದ್ರಿ ಬೆಟ್ಟವನ್ನು ಪ್ರವಾಸಿ ತಾಣವಾಗಿ ಘೋಷಿಸುವ ಬದಲು ತೀರ್ಥ ಕ್ಷೇತ್ರ ಎಂದು ಪರಿಗಣಿಸಿ ಅಭಿವೃದ್ಧಿ ಪಡಿಸುವಂತೆ ತಜ್ಞರು ಮತ್ತು ಪಂಡಿತರಿಂದ ಸಲಹೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಹನುಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲಿ ಭವ್ಯ ಮಂದಿರ ಕಟ್ಟಲು ಯೋಜನೆ ರೂಪಿಸಲಾಗಿದ್ದು, 12 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದಲೇ ರಥ ಯಾತ್ರೆಯನ್ನೂ ಆರಂಭಿಸಲಾಗಿದೆ. ಶೃಂಗೇರಿ ಶಾರದಾ ಪೀಠದಾ ಪೀಠದಿಂದ ರಥ ಯಾತ್ರೆಗೆ ಚಾಲನೆ ದೊರೆತಿದ್ದು, ರಾಜ್ಯಾದ್ಯಂತ ಒಂದು ವರ್ಷ ರಥ ಯಾತ್ರೆ ನಡೆಯಲಿದೆ. ರಾಮಾಯಣ ಒಪ್ಪದ ಟಿಟಿಡಿ:
ಆಂಜನೇಯನ ಜನ್ಮ ಸ್ಥಳದ ಬಗ್ಗೆ ಇರುವ ಪೌರಾಣಿಕ ದಾಖಲೆಯಾಗಿರುವ ರಾಮಾಯಣದಲ್ಲಿಯೇ ಕಿಷ್ಕಿಂದಾ ಪ್ರಸ್ತಾಪವಾಗಿದ್ದು, ಆಂಜನೇಯ ಕೂಡ ತಮ್ಮ ಜನ್ಮಸ್ಥಳದ ಬಗ್ಗೆ ಪ್ರಸ್ತಾಪ ಮಾಡಿದ್ದು, ಅದನ್ನೇ ಟಿಟಿಡಿ ಒಪ್ಪದಿರುವುದು ಸಮಸ್ಯೆಗೆ ಕಾರಣವಾಗಿದೆ. ಅದರ ಜೊತೆಗೆ ಪೂರಕವಾದ ದಾಖಲೆಗಳು ಅಗತ್ಯವಿರುವುದರಿಂದ ಸರ್ಕಾರ ಈಗ ಈ ಪ್ರಯತ್ನಕ್ಕೆ ಮುಂದಾಗಿದೆ. ಹನುಮನ ಜನ್ಮಸ್ಥಳ ವಾದ ಅಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ಮುಖ್ಯಮಂತ್ರಿ ಗಳು ವಿಶೇಷ ಆಸಕ್ತಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ರೂಪ ನೀಡಲಾಗುವುದು ಶಶಿಕಲಾ ಜೊಲ್ಲೆ, ಮುಜರಾಯಿ, ಹಜ್‌ಮತ್ತು ವಕ್ಫ್ ಸಚಿವರು. ಟಿಟಿಡಿಯವರು ತಿರುಮಲ ಅಂಜನಾದ್ರಿ ಬೆಟ್ಟವೇ ಹನುಮ ಜನ್ಮಸ್ಥಳ ಅಂತ ಅಭಿವೃದ್ಧಿ ಪಡಿಸಲು ಮುಂದಾಗಿರುವುದಕ್ಕೆ ಆಂದ್ರಪ್ರದೇಶ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೇವೆ. ಈಗ ನಮ್ಮ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಎಚ್.ಎಚ್. ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಫೌಂಡರ ಟ್ರಸ್ಟೀ, ಶ್ರೀ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್.