ಬೆಂಗಳೂರು:ಆ ರಾಕ್ಷಸನ್ನ ಎದುರಿಸೋ ಗಂಡು ಯಾರು ಇಲ್ವಾ? …ಎಂದು ಆ ಕಡೆ ಹಿರಿಯರು ಬೇಸರಿಸಿಕೊಳ್ಳುತ್ತಿರುವಾಗಲೇ, ಈ ಕಡೆ ಅಂಜನಿಪುತ್ರ ವಿರಾಜ್ ಎಂಟ್ರಿ ಕೊಡುತ್ತಾನೆ. ಹಾಗೆ ನೋಡಿದರೆ, ವಿರಾಜ್ ಆಗಲೇ ಭೈರವನ ಹುಡುಗರಿಗೆ ಒಮ್ಮೆ ಚಚ್ಚಿ ಬಿಸಾಕಿರುತ್ತಾನೆ. ಹೊಡೆದವನು ಯಾರೆಂದು ಗೊತ್ತಾಗದೆ ಭೈರವ ಸಹ ಚಡಪಡಿಸುತ್ತಿರುತ್ತಾನೆ. ಹೀಗಿರುವಾಗಲೇ ಇನ್ನೊಮ್ಮೆ ಭೈರವ ಇನ್ನೆಲ್ಲೋ, ಇನ್ನೇನೋ ಮಾಡಿ ತನ್ನ ಪಾಪದ ಕೊಡ ತುಂಬಿಸಿಕೊಳ್ಳುತ್ತಾನೆ. ಅಂಥವನನ್ನು ಬಗ್ಗು ಬಡಿಯುವ ಗಂಡಸರೇ ಇಲ್ವಾ? ಎಂದು ಕೇಳುವ ಹೊತ್ತಿಗೆ ಮತ್ತೆ ಅಲ್ಲಿಗೆ ಅಂಜನಿಪುತ್ರ ಎಂಟ್ರಿ ಕೊಡುತ್ತಾನೆ. ಅಂಜನಿ ಪುತ್ರನಿಂದ ಹೊಡೆತ ತಿಂದ ನಂತರವಷ್ಟೇ ಭೈರವನಿಗೆ ಗೊತ್ತಾಗುವುದು, ಈ ಹಿಂದೆ ತನ್ನ ಹುಡುಗರಿಗೆ ಹೊಡೆದಿದ್ದೂ ಅವನೇ, ಈ ಬಾರಿ ತನಗೆ ಹೊಡೆಯುತ್ತಿರುವುದೂ ಅವನೇ ಎಂದು. ಅಲ್ಲಿಂದ ಭೈರವ ಗುಟುರು ಹಾಕುತ್ತಾನೆ. ಅಂಜನಿ ಪುತ್ರನನ್ನು ಮಟಾಶ್ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಆದರೆ, ಅಷ್ಟು ಸುಲಭವಾ?
ಇಷ್ಟು ಹೇಳಿದರೆ, ಮುಂದೇನಾಗಬಹುದು ಎಂದು ನೂರಾರು ಚಿತ್ರಗಳನ್ನು ನೋಡಿರುವ ಪ್ರೇಕ್ಷಕ ಬಾಂಧವರು ಸುಲಭವಾಗಿ ಊಹಿಸಿಬಿಡಬಹುದು. ಕೊನೆಗೆ, ಇಲ್ಲೂ ನಿಮ್ಮ ಊಹೆ ತಪ್ಪೇನೂ ಆಗುವುದಿಲ್ಲ. ಕೊನೆಗೆ ಎಂದಿನಂತೆ ಭೈರವ ಸಾಯುತ್ತಾನೆ. ಅಂಜನಿ ಪುತ್ರ ವಿರಾಜ್, ಈ ಶತಮಾನದ ಮಾದರಿ ಗಂಡಾಗಿ ಮೆರೆಯುತ್ತಾನೆ. ಆದರೆ, ಹೇಗೆ ಅವೆಲ್ಲಾ ಆಗುತ್ತದೆ ಎಂಬ ಕುತೂಹಲವಿದ್ದರೆ ಚಿತ್ರ ನೋಡಬೇಕು. ಇಷ್ಟು ಕೇಳಿ ಇದೊಂದು ಹಳೆಯ ಕಥೆ ಎಂಬ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಕಥೆ ಎಷ್ಟು ಹಳತಾದರೂ, ಈಗಿನ ಕಾಲಘಟ್ಟದಲ್ಲಿ ಹೇಳಲಾಗುತ್ತದೆ ಎಂಬುದು ಮುಖ್ಯ. ಆ ಮಟ್ಟಿಗೆ “ಅಂಜನಿಪುತ್ರ’ ಒಂದು ಅಪ್‌ಡೇಟೆಡ್ ಚಿತ್ರ ಎಂದರೆ ತಪ್ಪಿಲ್ಲ. ಏಕೆಂದರೆ, ಇಲ್ಲಿ ಯೂಟ್ಯೂಬ್ ಪ್ರಮುಖ ಪಾತ್ರ ವಹಿಸುತ್ತದೆ, ರಾಜಾಸ್ಥಾನದವರೆಗೂ ಕಥೆ ಟ್ರಾವಲ್ ಆಗಿ ಬರುತ್ತದೆ, ಹಾಡುಗಳಿಗೆ ಸ್ಕಾಟ್‌ಲ್ಯಾಂಡ್ ವೇದಿಕೆಯಾಗುತ್ತದೆ. ಆ ಮಟ್ಟಿಗೆ ಚಿತ್ರಕ್ಕೆ ಆಧುನಿಕತೆಯ ಸ್ಪರ್ಶವನ್ನು ಇಲ್ಲಿ ಕೊಡಲಾಗಿದೆ. ಹಾಗಾಗಿ “ಅಂಜನಿಪುತ್ರ’ ಚಿತ್ರವು ಹೊಸತು ಮತ್ತು ಹಳೆಯದರ ಸಮ್ಮಿಲನ ಎಂದರೆ ತಪ್ಪಾಗಲಾರದು.
ಅಧಿಕೃತವಾಗಿ ಹೇಳಬೇಕೆಂದರೆ, “ಅಂಜನಿಪುತ್ರ’ ಚಿತ್ರವು ತಮಿಳಿನ “ಪೂಜೈ’ ರೀಮೇಕು. ಗೊತ್ತಿಲ್ಲದಿದ್ದವರು ಇದು “ದೊಡ್ಮನೆ ಹುಡ್ಗ’ ಚಿತ್ರದ ರೀಮೇಕ್ ಎಂದು ಭಾವಿಸುವ ಸಾಧ್ಯತೆಯೂ ಇದೆ. ಏಕೆಂದರೆ, “ದೊಡ್ಮನೆ ಹುಡ್ಗ’ ಚಿತ್ರಕ್ಕೂ, ಈ ಚಿತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ಪ್ರಮುಖವಾಗಿ ಅಲ್ಲಿ ನಾಯಕ ಅನಾಮಿಕನಾಗಿ ಬೇರೆಲ್ಲೋ ಬದುಕುತ್ತಿರುತ್ತಾನೆ, ಅದೇ ಸಂದರ್ಭದಲ್ಲಿ ಅವನಿಗೆ ನಾಯಕಿಯ ಪರಿಚಯವಾಗಿ ಲವ್ ಆಗುತ್ತದೆ, ಅಷ್ಟರಲ್ಲಿ ಅವನು “ದೊಡ್ಮನೆ ಹುಡ್ಗ’ ಎಂಬುದು ಗೊತ್ತಾಗುತ್ತದೆ, ಅಷ್ಟರಲ್ಲಿ ಏನೋ ಆಗಿ ಅವನು ತನ್ನ ಮನೆಗೆ ಹಿಂದುರುಗಬೇಕಾಗುತ್ತದೆ, ಊರಿಗೆ ಬಂದ ನಂತರ ಅವನಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತವೆ, ಅವೆಲ್ಲಾ ದೊಡ್ಮನೆ ಹುಡುಗ ಹೇಗೆ ಬಗೆಹರಿಸುತ್ತಾನೆ ಎಂಬುದು “ದೊಡ್ಮನೆ ಹುಡ್ಗ’ನ ಕಥೆಯಾದರೆ, “ಅಂಜನಿಪುತ್ರ’ದ ಕಥೆಯೂ ಇದೇ ತರಹ. ಪ್ರಮುಖವಾಗಿ ಅಲ್ಲಿನ ದೊಡ್ಮನೆ ಯಜಮಾನ ಬದಲು ಯಜಮಾನಿಯನ್ನು ಇಟ್ಟರೆ, “ಅಂಜನಿಪುತ್ರ’ವಾಗುತ್ತದೆ. ಆ ಮಟ್ಟಿಗೆ, ಪುನೀತ್‌ಗೆ ಈ ಚಿತ್ರ ವಿಶೇಷವೇನೂ ಅಲ್ಲ.
ಆದರೆ, ಈ ಚಿತ್ರವನ್ನು ವಿಶೇಷವಾಗಿ ಮಾಡುವಲ್ಲಿ ನಿರ್ದೇಶಕ ಹರ್ಷ ಅವರ ಪಾಲು ದೊಡ್ಡದಿದೆ. ಈ ಚಿತ್ರವನ್ನು ಪಕ್ಕಾ ಕಮರ್ಷಿಯಲ್ ಆಗಿ ಮತ್ತು ಪುನೀತ್ ಅವರ ಅಭಿಮಾನಿಗಳಿಗೆ ಅಹುದಹುದು ಎಂದು ಮೆಚ್ಚುವಂತೆ ಅವರು ನಿರೂಪಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆ್ಯಕ್ಷನ್ ಚಿತ್ರದಂತೆ ಕಂಡರೂ, ಇಲ್ಲಿ ಸಖತ್ ಸೆಂಟಿಮೆಂಟ್ ಇದೆ. ಮಜವಾದ ಕಾಮಿಡಿ ಇದೆ. ಒಂದಿಷ್ಟು ಥ್ರಿಲ್ಲಿಂಗ್ ಸನ್ನಿವೇಶಗಳೂ ಇವೆ. ಅವೆಲ್ಲವನ್ನೂ ಸಖತ್ ಆಗಿ ಕಟ್ಟಿಕೊಟ್ಟಿದ್ದಾರೆ ಹರ್ಷ. ಅದರಲ್ಲೂ ಮೊದಲಾರ್ಧ ಹೋಗುವುದೇ ಗೊತ್ತಾಗುವುದಿಲ್ಲ.
ದ್ವಿತೀಯಾರ್ಧ ಚಿತ್ರ ಸ್ವಲ್ಪ ನಿಧಾನವೆನಿಸುತ್ತದೆ. ಕಾಮಿಡಿ ಅತಿಯಾಯಿತು ಅನಿಸುತ್ತದೆ. ಈ ಹಂತದಲ್ಲಿ ಒಂದಿಷ್ಟು ಕತ್ತರಿ ಆಡಿಸಿದ್ದರೆ ಚಿತ್ರ ಇನ್ನಷ್ಟು ಚುರುಕಾಗಿರುತಿತ್ತು. ಅದು ಬಿಟ್ಟರೆ ಚಿತ್ರದಲ್ಲಿ ತಪ್ಪು ಹುಡುಕುದು ಸ್ವಲ್ಪ ಕಷ್ಟವೇ. ಇಡೀ ಚಿತ್ರದ ಹೈಲೈಟ್ ಎಂದರೆ ಎಂದಿನಂತೆ ಪುನೀತ್ ರಾಜಕುಮಾರ್.
ದೊಡ್ಮನೆ ಹುಡುಗನಾಗಿ, ತಾಯಿಯ ಪ್ರೀತಿಯ ಮಗನಾಗಿ, ಹಲವು ನೋವುಗಳನ್ನು ಹುದುಗಿಸಿಟ್ಟುಕೊಂಡ ವಿಷಕಂಠನಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಕುಟುಂಬದವರಿಗೆ ಪ್ರಾಣವನ್ನೇ ಕೊಡುವ ಹೈದನಾಗಿ ಪುನೀತ್ ಮಿಂಚಿದ್ದಾರೆ. ರಶ್ಮಿಕಾ ನೋಡಲು ಮುದ್ದುಮುದ್ದು. ಮುಖೇಶ್ ತಿವಾರಿ ಇಲ್ಲಿ ಹೆಚ್ಚು ಅರಚಾಡುವುದಿಲ್ಲ ಎನ್ನುವುದು ವಿಶೇಷ. ರಮ್ಯಾ ಕೃಷ್ಣ, ವಿಜಯಕಾಶಿ, ಕೆ.ಎಸ್. ಶ್ರೀಧರ್ ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅಮೃತ ಅತಿಯಾದರೆ ವಿಷವಾಗುತ್ತದೆ ಎಂಬ ಮಾತು ಚಿಕ್ಕಣ್ಣ ಅವರ ಕಾಮಿಡಿಗೆ ಹೇಳಿ ಮಾಡಿಸಿದಂತಿದೆ. ಆರಂಭದಲ್ಲಿ ನಗಿಸುವ ಚಿಕ್ಕಣ್ಣ ಅವರ ಕಾಮಿಡಿ, ಬರಬರುತ್ತಾ ಅಳಿಸುತ್ತದೆ. ಹಾಡುಗಳು ಮತ್ತು ಛಾಯಾಗ್ರಹಣ ಬಗ್ಗೆ ಚಕಾರವೆತ್ತುವಂತಿಲ್ಲ.
ಚಿತ್ರ: ಅಂಜನಿಪುತ್ರ
ನಿರ್ದೇಶನ: ಎ. ಹರ್ಷ
ನಿರ್ಮಾಣ: ಎಂ.ಎನ್. ಕುಮಾರ್
ತಾರಾಗಣ: ಪುನೀತ್ ರಾಜಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣ, ಮುಕೇಶ್ ತಿವಾರಿ, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಮುಂತಾದವರು
– ಚೇತನ್ ನಾಡಿಗೇರ್