Advertisement

ಹಾಸ್ಟೆಲ್‌ ದುಸ್ಥಿತಿ ಆರೋಪಕ್ಕೆ ಆಂಜನೇಯ ತಿರುಗೇಟು

12:08 PM Mar 14, 2018 | Team Udayavani |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳ ದುಸ್ಥಿತಿ ಕುರಿತಂತೆ ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಸಮೀಕ್ಷಾ ವರದಿಗೆ ತಿರುಗೇಟು ನೀಡಿರುವ ಇಲಾಖೆ ಸಚಿವ ಎಚ್‌.ಆಂಜನೇಯ, ಇಲಾಖೆ ಹಾಸ್ಟೆಲ್‌ಗ‌ಳ ಸ್ಥಿತಿಗತಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಪ್ರಗತಿಯನ್ನು ಅಂಕಿ ಅಂಶ ಸಹಿತ ಬಹಿರಂಗಪಡಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ 544 ಮೆಟ್ರಿಕ್‌ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳು, 52,775 ನಿಲಯಾರ್ಥಿಗಳಿಗೆ ಮಂಜೂರಾತಿ ನೀಡಲಾಗಿದ್ದು, 386 ಹಾಸ್ಟೆಲ್‌ಗ‌ಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.

ಭೋಜನಾ ವೆಚ್ಚ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ 750 ರೂ.ನಿಂದ 1,400 ರೂ.ಗೆ ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ 950 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ಪ್ರೋತ್ಸಾಹಧನವನ್ನು ದುಪ್ಪಟ್ಟಿಗಿಂತ ಹೆಚ್ಚು ಏರಿಸಲಾಗಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್‌ಗ‌ಳಲ್ಲಿ 100 ವಿದ್ಯಾರ್ಥಿಗಳಿಗೆ ಮಾತ್ರ ಇದ್ದ ಪ್ರವೇಶಾವಕಾಶವನ್ನು ಅರ್ಹ ಎಲ್ಲರಿಗೂ ಕಲ್ಪಿಸಲಾಗಿದ್ದು, ಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯವನ್ನೂ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಅರಮನೆಯಲ್ಲಿದ್ದರೇ?: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಅಲ್ಲದೇ ಅರಮನೆಯಲ್ಲಿಟ್ಟಿದ್ದರೇ? ಚುನಾವಣೆ ಸಮೀಪಿಸುತ್ತಿರುವ ಕಾರಣ ಸುಳ್ಳು ಅಂಕಿ ಅಂಶಗಳೊಂದಿಗೆ ಸರ್ಕಾರದ ವಿರುದ್ಧ ವೃಥಾರೋಪ ಮಾಡುತ್ತಿದ್ದಾರೆಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 2,227 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ನೀಡಿರುವ ವರದಿಯನ್ನು ಬಿಜೆಪಿ ಪ್ರಸ್ತಾಪಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವರದಿಯನ್ನು ನಾನು ನೋಡಿಲ್ಲ. ಅದರಲ್ಲೇನಿದೆ ಎಂಬುದು ಗೊತ್ತಿಲ್ಲ. ತರಿಸಿ ನೋಡುತ್ತೇನೆಂದು ಹೇಳಿದರು.

Advertisement

ಬಾಬು ಜಗಜೀವನ್‌ರಾಂ ಅಲ್ಲ, ಆದಿಜಾಂಬವ ಅಭಿವೃದ್ಧಿ ನಿಗಮ
ಬೆಂಗಳೂರು: ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಉದ್ದೇಶಿತ ಡಾ.ಬಾಬು ಜಗಜೀವನ್‌ರಾಂ ಅಭಿವೃದ್ಧಿ ನಿಗಮದ ಹೆಸರನ್ನು ಆದಿ ಜಾಂಬವ ಅಭಿವೃದ್ಧಿ ನಿಗಮ ಎಂದು ಪರಿವರ್ತಿಸಲು ತೀರ್ಮಾನಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಡಾ.ಬಾಬು ಜಗಜೀವನ್‌ರಾಂ ಹೆಸರಿನಲ್ಲಿ ಈಗಾಗಲೇ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಇದೆ.

ಹೀಗಾಗಿ ಹೊಸ ಅಭಿವೃದ್ಧಿ ನಿಗಮಕ್ಕೆ ಆದಿ ಜಾಂಬವ ಅಭಿವೃದ್ಧಿ ನಿಗಮ ಎಂದು ಹೆಸರಿಡಲಾಗುವುದು ಎಂದು ಹೇಳಿದರು. ಸದಾಶಿವ ಆಯೋಗದ ವರದಿ ಕುರಿತು ಮಾತನಾಡಿ, ವರದಿ ಜಾರಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ವರದಿ ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next