Advertisement

ಅಂಜನಾದ್ರಿ ಅಭಿವೃದಿ ಸಂಕಲ್ಪ : ಸಚಿವ ಸಿಂಗ್‌

02:45 PM Jun 24, 2022 | Team Udayavani |

ಕೊಪ್ಪಳ: ಮೀಡಿಯಾ ಕ್ಲಬ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹಾಗೂ ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಕುರಿತು ಪತ್ರಕರ್ತರೊಂದಿಗೆ “ಮೀಟ್‌ ಟೂ ದಿ ಪ್ರೆಸ್‌ʼ ಎನ್ನುವ ಸಂವಾದ ನಡೆಯಿತು. ಸಭೆಯಲ್ಲಿ ನೀರಾವರಿ, ಕುಡಿವ ನೀರು, ಕೆರೆ ತುಂಬಿಸುವ ಯೋಜನೆ, ವಿಮಾನ ನಿಲ್ದಾಣ ಸ್ಥಾಪನೆ ಸೇರಿ ಸ್ವದೇಶಿ ಸಂಪರ್ಕದಡಿ ಅಂಜಿನಾದ್ರಿಯ ಅಭಿವೃದ್ಧಿಯ ಸಂಕಲ್ಪದ ಕುರಿತು ಚರ್ಚೆಯಾದವು.

Advertisement

ಜಿಲ್ಲೆಗಳ ಪ್ರವಾಸೋದ್ಯಮ ಉತ್ತೇಜನ ನೀಡಿದೆ. ಇಲ್ಲಿನ ಅಂಜನಾದ್ರಿಗೆ ರಾಜ್ಯ ಸರ್ಕಾರ 100 ಕೋಟಿ ಘೋಷಿಸಿದೆ. ಕೇಂದ್ರ ಸ್ವದೇಶಿ ಸಂಪರ್ಕ ಯೋಜನೆಯಡಿ 100 ಕೋಟಿ ಕೊಟ್ಟರೆ ಒಟ್ಟು 200 ಕೋಟಿಯಲ್ಲಿ ಸಮಗ್ರ ಅಭಿವೃದ್ಧಿ ನಡೆಯಲಿದೆ. ಹುಲಿಗೆಮ್ಮ ದೇವಸ್ಥಾನದ ಆದಾಯ ಹೆಚ್ಚಿದೆ. ಇಲ್ಲಿಗೆ ಸಾವಿರಾರು ಭಕ್ತರು ಬರುತ್ತಾರೆ. ಅಲ್ಲಿನ ಭಕ್ತರ ವಾಸ್ತವ್ಯಕ್ಕೆ, ಸ್ನಾನಗೃಹ, ವಸತಿ ಗೃಹಗಳು ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಮಾತನಾಡುವೆ ಎಂದರು.

ವಿವಿ ಸ್ಥಾಪನೆಗೆ ಕ್ರಮ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಿದೆ. ಈ ಬಜೆಟ್‌ನಲ್ಲಿ ಹೊಸ ವಿವಿ ಘೋಷಣೆಯಾಗಿದ್ದು, ಇಲ್ಲಿನ ಸಚಿವರು, ಸಂಸದರು ಸೇರಿ ಶಾಸಕರ ಜೊತೆಗೆ ಸಮಾಲೋಚಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹೊಸ ವಿವಿ ಸ್ಥಾಪನೆ ಮಾಡುವ ಪ್ರಯತ್ನಿಸುವೆ ಎಂದರು.

ಹೂಳೆತ್ತುವ ಚಿಂತನೆ: ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದೆ. ಸರ್ಕಾರದಿಂದ ಹೂಳು ತೆಗೆಸಲು ಹೊರೆಯಾಗಲಿದೆ. ಆದರೆ ಅದೇ ಹೂಳನ್ನು ರೈತರಿಗೆ ಉಚಿತ ಕೊಡುವ ಚಿಂತನೆಯಿದೆ. ರಸ್ತೆ ಸೇರಿ ಇತರೆ ಕಾಮಗಾರಿಗಳಿಗೂ ಡ್ಯಾಂ ಹೂಳು ಬಳಸಬಹುದು. ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ರೈತರಿಗೆ ಉಚಿತ ಹೂಳು ಕೊಡಲು ಚರ್ಚಿಸಿದ್ದೇನೆ. ಇದಕ್ಕೆ ತುಂಗಭದ್ರಾ ಬೋರ್ಡ್‌ನಿಂದಲೂ ಸಮ್ಮತಿಯಿದೆ ಎಂದರಲ್ಲದೇ ಜಿಲ್ಲೆಯ ಏತ ನೀರಾವರಿ ವಿಚಾರಗಳ ಕುರಿತು ಗಮನ ಹರಿಸುವೆ ಎಂದರು.

ಕುಡಿಯುವ ನೀರು ಸಂರಕ್ಷಿಸಬೇಕಿದೆ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಇವೆ. ಆದರೆ ಸರಿಯಾಗಿ ನಾವು ನೀರು ಪೂರೈಕೆಯ ವ್ಯವಸ್ಥೆ ಹೊಂದಿಲ್ಲ. ಯಾರೋ ಯೋಜನೆ ಮಾಡ್ತಾರೆ? ಯಾರೋ ನೀರು ಬಿಡ್ತಾರೆ? ಯಾರೋ ನಿರ್ವಹಣೆ ಮಾಡ್ತಾರೆ? ಹೀಗಾಗಿ ಸಮಸ್ಯೆ ಹೆಚ್ಚಿದೆ. ನೀರು ಬಳಕೆಯಲ್ಲಿ ಜನ ಜಾಗೃತರಾಗಬೇಕಿದೆ. ನೀರು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

Advertisement

ಜಿಲ್ಲಾಸ್ಪತ್ರೆ ಸರ್ಜನ್‌ಗೆ ನೇಮಕಕ್ಕೆ ಕ್ರಮ: ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರ ಖಾಯಂ ನೇಮಕಾತಿಗೆ ಆರೋಗ್ಯ ಸಚಿ ವರಿಗೆ ಮಾತನಾಡಿದ್ದು, ಅವರು ಸಹ ಖಾಯಂ ಸರ್ಜನ್‌ ನೇಮಕದ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಶಾಸಕರೂ ಸಚಿವರಿಗೆ ಮಾತನಾಡಿದ್ದಾರೆ. ಇದಲ್ಲದೇ ಎಂಸಿಎಚ್‌ ಆಸ್ಪತ್ರೆ ಬೇಗನೆ ಉದ್ಘಾಟನೆಗೆ ಸೂಚಿಸಿದೆ ಎಂದರು.

ಹುಲಿಕೆರೆ ಸ್ಥಳಕ್ಕೆ ಭೇಟಿ ನೀಡುವೆ: ಹುಲಿಕೆರೆ ಅಭಿವೃದ್ಧಿಗೆ ಪ್ರಯತ್ನ ಮಾಡುವೆ. ಅಲ್ಲಿ ಏನೆಲ್ಲಾ ಕೆಲಸ ನಡೆದಿವೆ. ಏನು ನಡೆದಿಲ್ಲ. ಜಿಲ್ಲಾ ಹಂತದಲ್ಲಿ ಏನೆಲ್ಲಾ ಪತ್ರ ವ್ಯವಹಾರಗಳು ನಡೆದಿವೆ ಎನ್ನುವ ಮಾಹಿತಿಯಿದ್ದರೆ ಕೊಡಿ. ಇಲ್ಲದಿದ್ದರೆ ನಾನೇ ಅಧಿ ಕಾರಿಗಳಿಂದ ವರದಿ ತರಿಸಿಕೊಳ್ಳುವೆ. ಹುಲಿಕೆರೆಯಲ್ಲಿ ಏನು ಮಾಡಬೇಕು ಎನ್ನುವ ಕುರಿತು ಯೋಜನೆ ರೂಪಿಸಲಾಗುವುದು. ಅಲ್ಲದೇ, ಸ್ಥಳಕ್ಕೂ ಭೇಟಿ ನೀಡುವೆನು ಎಂದರು.

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ: ಇಲ್ಲಿನ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಸಿಇಒಗೆ ಇತಿಮಿತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಿ ಎಂದಿದ್ದೇನೆ. ಆಡಳಿತದಲ್ಲಿ ಹೊಸತನ ತನ್ನಿ ಎಂದು ಹೇಳಿದ್ದೇನೆ. ಹೇಗೆ ಬಿಸಿ ಮುಟ್ಟಿಸಬೇಕೋ ಹಾಗೆ ಬಿಸಿ ಮುಟ್ಟಿಸಿದ್ದೇನೆ. ಕೆಲವೊಂದು ಆಂತರಿಕ ವಿಚಾರ ಹೇಳಲು ಬರುವುದಿಲ್ಲ ಎಂದರು.

ಕೆರೆ ತುಂಬಿಸುವ ಯೋಜನೆ ಗಮನಿಸುವೆ: ಕೊಪ್ಪಳ-ಯಲಬುರ್ಗಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗಮನಿಸುವೆ. ತುಂಗಭದ್ರಾ ಡ್ಯಾಂನಿಂದ ಕೆರೆಗೆ ನೀರು ತುಂಬಿಸಲು ನದಿಪಾತ್ರದಡಿ ನೀರು ನಾಯಿ ಸಂರಕ್ಷಿತ ಪ್ರದೇಶ ಬರುವುದರಿಂದ ಕೇಂದ್ರ ಸರ್ಕಾರದ ಸಮ್ಮತಿ ಬೇಕಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದನ್ನು ಪರಿಶೀಲಿಸುವೆ. ಹಿರೇಹಳ್ಳದ ಯೋಜನೆ ಗಮನಿಸುವೆ ಎಂದರು.

ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಜಿಲ್ಲೆ ಸಮಸ್ಯೆಗಳ ಕುರಿತು ಸ್ಥಳೀಯ ಶಾಸಕರಿಗೆ ಸಮಸ್ಯೆ ಗಮನಕ್ಕೆ ತನ್ನಿ, ಇಲ್ಲಿ ರಾಜಕೀಯ ಮಾಡುವ ಬದಲಾಗಿ ಅಭಿವೃದ್ಧಿ ಮಾಡಬೇಕು. ಯಾವುದೇ ಪಕ್ಷ, ಸರ್ಕಾರ ಇರಲಿ. ನಮ್ಮ ಆಡಳಿತ ಇಲ್ಲ ಎನ್ನುವ ಬದಲು, ರಾಜಕೀಯ ಮಾಡುವ ಬದಲು ಒಟ್ಟಾಗಿ ಕೆಲಸ ಮಾಡಬೇಕು. ಸರ್ಕಾರದ ಕಾರ್ಯದರ್ಶಿಗಳನ್ನ ಇಲ್ಲಿನ ಶಾಸಕರು ಕಚೇರಿ ಕಚೇರಿಗೆ ಸುತ್ತಾಡಿ ಕೆಲಸ ಮಾಡಿಸಿಕೊಳ್ಳಬೇಕು ಎಂದರು.

ವಿಮಾನ ನಿಲ್ದಾಣಕ್ಕೆ ಎಂಎಸ್‌ಪಿಎಲ್‌ ಕೊಡುವುದಿಲ್ಲ ಎಂದಿದ್ದಾರೆ. ಜಿಲ್ಲಾಡಳಿತವೇ ಹೊಸ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕುಷ್ಟಗಿ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಕುರಿತು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ ಅನುಸಾರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next