Advertisement

ಅಂಜನಾ ಕಿತಾಬ್‌

08:15 AM Feb 09, 2018 | |

ತೂಕ ಇಳಿಸುವುದು ಹೇಗೆ, ರುಚಿಕಟ್ಟಾಗಿ ಅಡುಗೆ ಮಾಡುವುದು ಹೇಗೆ, ಸ್ಟೈಲಾಗಿ ಯೋಗ ಮಾಡುವುದು ಹೇಗೆ ಎಂಬುದನ್ನೆಲ್ಲ ಕಲಿಸಲು ಹಲವು ನಟೀಮಣಿಯರು ಪುಸ್ತಕ ಬರೆದಿದ್ದಾರೆ. ಆದರೆ ಅಡುಗೆ ಮನೆಯ ಬಜೆಟ್‌ ಹೊಂದಿಸುವುದು ಹೇಗೆ ಎಂದು ಯಾರಾದರೂ ಬರೆದಿದ್ದಾರೆಯೇ? ಇಷ್ಟಕ್ಕೂ ಇದೊಂದು ಪುಸ್ತಕ ಬರೆಯುವಷ್ಟು ದೊಡ್ಡ ಸಂಗತಿಯಾ? ಅಂಜನಾ ಸುಖಾನಿ ಪ್ರಕಾರ ಹೌದು. ಮನೆಯ ಬಜೆಟ್‌ನಲ್ಲಿ ಮಹಿಳೆಯರದ್ದೇ ಮುಖ್ಯ ಪಾತ್ರ. ಒಂದೊಂದು ಪೈಸೆಯನ್ನು ಲೆಕ್ಕ ಹಾಕಿ ಖರ್ಚು ಮಾಡುವ ಕಲೆ ಅವರಿಗೆ ಮಾತ್ರ ಕರಗತವಾಗಿರುತ್ತದೆ. ಆದರೆ ಇಷ್ಟರತನಕ ಯಾರೂ ಗೃಹಿಣಿಯರ ಈ ಕಲೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಅಂಜನಾ ಈ ಕುರಿತು “ಹಿಸಾಬ್‌ ಕಿತಾಬ್‌’ ಎಂಬ ಪುಸ್ತಕ ಬರೆದಿದ್ದಾಳೆ. ಅಚ್ಚಿನ ಮನೆಯಲ್ಲಿರುವ ಪುಸ್ತಕ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ. ಇದು ನನ್ನದೇ ಅನುಭವ ಕಥನ ಎಂದು ಮುನ್ನುಡಿಯಲ್ಲೇ ಅಂಜನಾ ಹೇಳಿಕೊಂಡಿದ್ದಾಳೆ. ಹಾಗೆಂದು ಇದು ಹೇಗೆ ಹಣ ಉಳಿತಾಯ ಮಾಡುವುದು ಎಂದು ಉಪದೇಶ ನೀಡುವ ಪುಸ್ತಕ ಅಲ್ಲ. ಗೃಹಿಣಿಯರು ಮತ್ತು ನೌಕರಿಯಲ್ಲಿರುವ ಮಹಿಳೆಯರು ಹೇಗೆ ಮನೆಯ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಾರೆ, ಈ ಸಂದರ್ಭದಲ್ಲಿ ಅವರು ಎದುರಿಸುವ ಸಮಸ್ಯೆಗಳು, ಅವರ ಮಾನಸಿಕ ತೊಳಲಾಟ ಇತ್ಯಾದಿಗಳ ನೈಜ ಚಿತ್ರಣ ಎನ್ನುವುದು ಅಂಜನಾ ನೀಡುವ ವಿವರಣೆ. ಅಂದ ಹಾಗೆ ಈ ಅಂಜನಾ ಯಾರು? ಸಲಾಮ್‌-ಇ-ಇಶ್ಕ್, ಗೋಲ್‌ಮಾಲ್‌ ರಿಟರ್ನ್ಸ್, ಅಲ್ಲಾ ಕೆ ಬಂದೇ ಇತ್ಯಾದಿ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರೂ ಹಿಟ್‌ ಆಗದೆ ಉಳಿದಿರುವ ನಟಿ ಅಂಜನಾ ಸುಖಾನಿ. ಹದಿಮೂರು ವರ್ಷಗಳ ಹಿಂದೆಯೇ ಬಾಲಿವುಡ್‌ಗೆ ಬಂದಿದ್ದರೂ ಇಷ್ಟರ ತನಕ ನಟಿಸಿರುವುದು ಇಪ್ಪತ್ತೂ ಚಿಲ್ಲರೆ ಚಿತ್ರಗಳಲ್ಲಿ ಮಾತ್ರ. ಅದರಲ್ಲಿ ಕನ್ನಡ, ತಮಿಳು, ತೆಲುಗು, ಪಂಜಾಬಿ, ಮರಾಠಿ ಭಾಷೆಗಳ ಚಿತ್ರವೂ ಸೇರಿದೆ. ಸಿನೆಮಾದ ಹಿನ್ನೆಲೆಯಿಲ್ಲದ ರಾಜಸ್ಥಾನದ ಸಿಂಧಿ ಕುಟುಂಬವೊಂದರಲ್ಲಿ ಜನಿಸಿದ ಅಂಜನಾ, ಬಣ್ಣ ಹಚ್ಚಿದ್ದೇ ಒಂದು ಪವಾಡ. ಬಣ್ಣದ ಬದುಕಿನ ಹೋರಾಟದಲ್ಲಿ ಜಾಹೀರಾತು ಚಿತ್ರವೊಂದರಲ್ಲಿ ಅಮಿತಾಭ್‌ ಬಚ್ಚನ್‌ ಜತೆಗೆ ನಟಿಸಲು ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಎಂದು ಭಾವಿಸಿಕೊಂಡಿದ್ದಾಳೆ. ಸದ್ಯ ಕೈಯಲ್ಲಿ ಯಾವುದೇ ಸಿನೆಮಾ ಇಲ್ಲದಿದ್ದರೂ, ಪುಸ್ತಕ, ಆಲ್ಬಂ, ಟಿವಿ ಕಾರ್ಯಕ್ರಮ ಎಂದು ಫ‌ುಲ್‌ ಬ್ಯುಸಿಯಾಗಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next