ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಅಂತೂ ಮೀನು ಕಂಡರೆ ಪಂಚಪ್ರಾಣ. ಮೀನು ತುಂಬಾ ಆರೋಗ್ಯಕರ ಆಹಾರ. ಮೀನಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣಾಂಶ, ಮೆಗ್ನಿಶಿಯಂ ಹಾಗೂ ಪೊಟಾಶಿಯಂನಂತಹ ಖನಿಜಾಂಶಗಳಿರುತ್ತದೆ.
ಒಂದೊಂದು ಮೀನು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ಅದರಲ್ಲಿ ಅಂಜಲ್ ಫಿಶ್ ಹೆಸರು ಕೇಳಿದರೆ ಸಾಕು ಮೀನು ಪ್ರಿಯರ ಬಾಯಲ್ಲಿ ನೀರೂರಿಸುವುದು ಸಹಜ.
ಅಂಜಲ್ ಮೀನಿನ ವಿಶೇಷತೆಯೆಂದರೆ ಇದು ರುಚಿಯ ಜೊತೆಗೆ ಮುಳ್ಳು ಕಡಿಮೆ ಇರುವುದರಿಂದ ಮಕ್ಕಳು ಸಹ ಇಷ್ಟಪಡುತ್ತಾರೆ.
ಈ ಮೀನಿನಿಂದ ಸಾರು ಮಾಡುವ ಬದಲು ಫ್ರೈ ಮಾಡಿ ತಿಂದರೆ ಅದರ ಮಜಾವೇ ಬೇರೆ ಯಾಕೆಂದರೆ ಅದರಿಂದ ಮಾಡುವ ತವಾ ಫ್ರೈ ಬಲು ರುಚಿ.
Related Articles
ಹಾಗಾದರೆ ಮತ್ಯಾಕೆ ತಡ ನೀವೂ ಕೂಡಾ ನಿಮ್ಮ ಮನೆಯಲ್ಲಿ ಅಂಜಲ್ ತವಾ ಫ್ರೈ ಮಾಡಿ ನೋಡಿ
ಅಂಜಲ್ ಮೀನಿನ ತವಾ ಫ್ರೈ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ….
ಬೇಕಾಗುವ ಸಾಮಗ್ರಿಗಳು
ಅಂಜಲ್ ಮೀನು- ಅರ್ಧ ಕೆಜಿ, ಖಾರದ ಪುಡಿ- 3ಚಮಚ,ಅರಿಶಿನ ಪುಡಿ- ಅರ್ಧ ಚಮಚ,ಫಿಶ್ ಮಸಾಲ ಪೌಡರ್-4 ಚಮಚ -ನಿಂಬೆಹಣ್ಣು-1, ಎಣ್ಣೆ ,ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
-ಮೊದಲು ಮೀನನ್ನು ತುಂಡರಿಸಿ ಅರಿಶಿನ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.
– ಒಂದು ತಟ್ಟೆಗೆ ಅರಿಶಿನ, ಉಪ್ಪು, ಖಾರದ ಪುಡಿ,ಫಿಶ್ ಮಸಾಲ ಪೌಡರ್ ಮತ್ತು ನಿಂಬೆ ಹಣ್ಣಿನ ರಸ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಅದಕ್ಕೆ ಮೀನನ್ನು ಹಾಕಿ ಆ ಪೇಸ್ಟ್ ಅನ್ನು ಮೀನಿನ ತುಂಡುಗಳ ಮೇಲೆ ಚೆನ್ನಾಗಿ ಸವರಿ.
-ಈಗ ಮೀನು ಮಸಾಲೆಯನ್ನು ಚೆನ್ನಾಗಿ ಹೀರಿ ಕೊಳ್ಳಲು 1ಗಂಟೆಗಳ ಕಾಲ ಹಾಗೇ ಬಿಡಿ.
-ತವಾ ಬಿಸಿ ಮಾಡಿ ಅದಕ್ಕೆ 3 ಚಮಚ ಎಣ್ಣೆ ಹಾಕಿ ಸಣ್ಣ ಉರಿ ಮಾಡಿ ಮೀನು ಹಾಕಿ 10 ನಿಮಿಷ ಫ್ರೈ ಮಾಡಿ ನಂತರ ಅದರ ಮತ್ತೊಂದು ಬದಿಯನ್ನು ಕೂಡ ಫ್ರೈ ಮಾಡಿದರೆ ಅಂಜಲ್ ಮೀನಿನ ತವಾ ಫ್ರೈ ಸವಿಯಲು ಸಿದ್ಧ.
ಇದನ್ನು ಕೊತ್ತಂಬರಿ ಸೊಪ್ಪು ಮತ್ತು ನಿಂಬೆಹಣ್ಣಿನಿಂದ ಅಲಂಕರಿಸಿ ಸರ್ವ್ ಮಾಡಿ.
-ಶ್ರೀರಾಮ ಜಿ.ನಾಯಕ್