Advertisement

ಕಠಿನ ಸಾಧನೆಯ ಅನಾವರಣ ಅನೀಶ್‌ ಕಛೇರಿ

04:22 PM Dec 08, 2017 | Team Udayavani |

ಪುತ್ತೂರಿನ ಶ್ರೀ ಮಹಾಬಲ – ಲಲಿತ ಕಲಾ ಸಭಾ ಹಾಗೂ ಬಹುವಚನಂ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ
ಡಾ| ಶ್ರೀಶ ಕುಮಾರ್‌ ಅವರ ಸ್ವಗೃಹದ ಪದ್ಮಿನಿ ಸಭಾಂಗಣದಲ್ಲಿ ವಿ| ಅನೀಶ್‌ ಭಟ್ಟರ ಕರ್ನಾಟಕ ಸಂಗೀತ ಕಛೇರಿಯನ್ನು ಆಯೋಜಿಸ ಲಾಗಿತ್ತು. ಸುಮಾರು ಎರಡೂವರೆ ಗಂಟೆ ಅವಧಿಯ ಕಛೇರಿ ಇತ್ತೀಚೆಗಿನ ಪುತ್ತೂರು ಪರಿಸರದ ಯುವ ಸಾಧಕರಲ್ಲಿ ವಿಶೇಷವಾಗಿ ಪರಿಗಣಿಸ ಲ್ಪಡುತ್ತಿರುವ ಅನೀಶ್‌ ಅವರ ಕಠಿನ ಸಾಧನೆಯ ಅನಾವರಣವಾಗಿತ್ತು. 

Advertisement

ನಳಿನಕಾಂತಿಯ ವರ್ಣದೊಂದಿಗೆ ಪ್ರಾರಂಭಿಸಿ ಮುಂದೆ ಶ್ರೀಮುತ್ತು ಸ್ವಾಮಿ ದೀಕ್ಷಿತರ ವಲ್ಲಭನಾಯಕಸ್ಯದ ಮೂಲಕ ಸಾಗಿ ಆರೈಕೆಗಾಗಿ ನಟಬೈರವಿಯನ್ನು ಆಯ್ದುಕೊಂಡರು. ವೇದಿಕೆಗಳಲ್ಲಿ ಶ್ರೀವಲ್ಲಿ ದೇವ ಸೇನಾಪತೆ ಆಗೊಮ್ಮೆ ಈಗೊಮ್ಮೆ ಕೇಳಿಸಿಕೊಂಡರೂ ರಾಗ ವಿಸ್ತಾರ ವಿರಳವೇ. ಸುಲಭವಾಗಿ ಸಾರಮತಿಗೋ ಅಮೃತ ವಾಹಿನಿಗೋ ತುಸು ಜಾರಿಬಿಡಬಹುದಾದ ಅಪಾಯವಿದ್ದರೂ ಕಠಿನ ಸಾಧನೆಯಿಂದ ಅಪಾಯಗಳಿಗೆ ಸಿಲುಕದೆ ನಟಭೈರವಿಯನ್ನು ಸಮರ್ಪಕವಾಗಿ ನಿರೂಪಿಸಿ ಸಾಹಿತ್ಯ ವಿಸ್ತಾರವನ್ನೂ ಮಾಡಿ ಸುಂದರ ಆಯ್ದ ಕಲ್ಪನಾ ಸ್ವರಗಳ ಮೂಲಕ ಉತ್ತಮವಾಗಿಯೇ ನಿರೂಪಿಸಿದರು. ಶ್ರೀ ಮುತ್ತಯ್ಯ ಭಾಗವತರ ಸುಧಾಮಯಿಯನ್ನು ತುರುಸಿನಿಂದ ಮಂಡಿಸಿ, ಶ್ರೀ ಸ್ವಾತಿ ತಿರುನಾಳ್‌ರ ವಿಹಾರ ಮಾನಸವನ್ನು ಗಂಭೀರವಾಗಿ ಆಯ್ದುಕೊಂಡರು.

ಮುಂದೆ ಪ್ರಧಾನವಾಗಿ ಹೇಮಾವತಿಯನ್ನು ಶ್ರೀ ದೀಕ್ಷಿತರ ಶ್ರೀ ಕಾಂತಿಮತಿಗಾಗಿ ಆರಿಸಿಕೊಂಡರು. ರಾಗವಿಸ್ತಾರ ಕ್ಷೇತ್ರದಲ್ಲಿ ತನ್ನ ಸಾಧನೆಯ ತುಸು ಪರಿಚಯ ಮಾಡಿಕೊಟ್ಟ ಕಲಾವಿದರು ರಾಗದ ಪೂರ್ಣ ಛಾಯೆ ತರುವಲ್ಲಿ ಸಫ‌ಲರಾದರು. ಗಂಭೀರವಾಗಿ ಸಾಗಿದ ಕೃತಿ ಪ್ರಸ್ತುತಿ ಪರ್ಯಾಪ್ತವಾದ ಕಲ್ಪನಾ ಸ್ವರಗಳೊಂದಿಗೆ ಕಾರ್ಯಕ್ರಮದ ಪ್ರಧಾನ ಅಂಗವಾಗಿ ಮೂಡಿಬಂದಿತು. 

ಮುಂದೆ ರಾಗಂ ತಾನಂ ಪಲ್ಲವಿಗಾಗಿ ಚಾರುಕೇಶಿಯನ್ನು ಆರಿಸಿ ಸೀಮಿತ ಅವಧಿಯಲ್ಲಿ ಮಂಡಿಸಿ ತಾನದಲ್ಲಿ ವಿವರವಾಗಿ ಅನಾವರಣಗೊಳಿಸಿದರು. ತ್ರಿಶ್ರ ತ್ರಿಪುಟದ ಪಲ್ಲವಿಯನ್ನು ಮಂಡಿಸಿ ವಿಸ್ತರಿಸುವಾಗ ಸಾಮಾನ್ಯ ಸಾಂಪ್ರದಾಯಿಕ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಿ ತಾಳ ಹಾಗೂ ಸಾಹಿತ್ಯಗಳ ವಿವಿಧ ಸ್ತರಗಳಲ್ಲೂ ಕಲ್ಪನಾ ಸ್ವರಗಳನ್ನೂ ಆಯ್ದು ಉತ್ತಮವಾಗಿ ನಿರೂಪಿಸಿದರು. 

ದೈವದತ್ತವಾದ ಸಂಗೀತವನ್ನು ಸಾಧನೆಯ ಮೂಲಕ ಒಲಿಸಿಕೊಳ್ಳುವ ಇವರ ಪ್ರಯತ್ನಕ್ಕೆ ಎಲ್ಲ ಸಂಗೀತ ಪ್ರೇಮಿಗಳ ಆಶೀರ್ವಾದ ಬೇಕು. ವಯಲಿನ್‌ ವಾದನದಲ್ಲಿ ಸಹಕರಿಸಿದ ವಿಶ್ವಜಿತ್‌ ಹಾಗೂ ಮೃದಂಗದಲ್ಲಿ ಸಹಕರಿಸಿದ ಸುನಾದಕೃಷ್ಣ ಈರ್ವರೂ ಅಭಿನಂದನಾರ್ಹರು. ಸಿಂಧುಭೈರವಿಯ ಭಜನೆಯೊಂದಿಗೆ ಮುಕ್ತಾಯವಾದ ಕಾರ್ಯಕ್ರಮ ದಲ್ಲಿ ಆಯ್ದ ರಸಿಕರು ಸಾಕ್ಷಿಯಾಗಿ ಅಂತ್ಯದವರೆಗೂ ಇದ್ದು ಸಹಕರಿಸಿ ದುದು ಗಮನಾರ್ಹ. ಎಳೆಯರ ಇಂತಹ ಕಾರ್ಯಕ್ರಮಗಳು ಸಾಧ್ಯವಾದೆಡೆಗಳಲ್ಲಿ ನಡೆಯುವಂತಾದರೆ ಉತ್ತಮ. ಸಂಯೋಜಕರಾದ ಡಾ| ಶ್ರೀಶ ಕುಮಾರ್‌ ಹಾಗೂ ಡಾ| ಶ್ರೀಪ್ರಕಾಶ್‌ ಅವರಿಗೆ ವಿಶೇಷ ಕೃತಜ್ಞತೆಗಳು ಸಲ್ಲಬೇಕು.

Advertisement

ವಿ| ರಾಮಕೃಷ್ಣ  ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next