ಮುಂಬಯಿ: ಪ್ರತೀ ತಿಂಗಳು 100 ಕೋ.ರೂ. ವಸೂಲಿ ಮಾಡುವಂತೆ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂಬ ನಿರ್ಗಮಿತ ಮುಂಬಯಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರ ಸ್ಫೋಟಕ ಹೇಳಿಕೆ ಮಹಾರಾಷ್ಟ್ರದ ರಾಜಕಾರಣದಲ್ಲಿ ಭಾರೀ ತಲ್ಲಣ ಉಂಟುಮಾಡಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ)ಯಲ್ಲಿ ಒಡಕಿಗೂ ಕಾರಣವಾಗಿದೆ. ಸೋಮವಾರ ಅನಿಲ್ ದೇಶ್‌ಮುಖ್ ಅವರ ತಲೆದಂಡದ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ವಸೂಲಿ ಹೇಳಿಕೆಯ ಸಮಯವನ್ನು ಪ್ರಶ್ನಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಈ ಬಗ್ಗೆ ಕೂಲಂಕಷ, ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ದೇಶ್‌ಮುಖ್ ವಿರುದ್ಧ ಸಿಎಂ ಉದ್ಧವ್ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.
ಪರಂಬೀರ್ ಸಿಂಗ್ ಹೇಳಿಕೆ ಮತ್ತು ಸಚಿನ್ ವೇಜ್ ಪ್ರಕರಣದಿಂದ ಎಂವಿಎ ಸರಕಾರದ ವರ್ಚಸ್ಸಿಗೆ ಭಾರೀ ಧಕ್ಕೆಯಾಗಿದೆ ಎಂದು ಶಿವಸೇನೆ ಹೇಳಿದೆ. ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಕೂಡ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಪರಂಬೀರ್ ಸಿಂಗ್ ಅವರ ಆರೋಪಗಳ ಸಂಬಂಧ ಅನಿಲ್ ದೇಶ್‌ಮುಖ್ 8 ಅಂಶಗಳ ಸುದೀರ್ಘ ಸ್ಪಷ್ಟನೆ ಮೂಲಕ ತಿರುಗೇಟು ನೀಡಿದ್ದಾರೆ.
ಇಂದು ನಿರ್ಧಾರ? :
ಅನಿಲ್ ದೇಶ್‌ಮುಖ್ ವಿಚಾರ ವಾಗಿ ನಿರ್ಧಾರ ತೆಗೆದುಕೊಳ್ಳಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸೋಮವಾರ ಸರಣಿ ಸಭೆ ನಡೆಸಲಿದ್ದಾರೆ. ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಎನ್‌ಸಿಪಿಯ ಪರಮೋಚ್ಚ ನಾಯಕ ಶರದ್ ಪವಾರ್, ದೇಶ್‌ಮುಖ್ ರಾಜೀನಾಮೆ ಬಗ್ಗೆ ಖಚಿತವಾಗಿ ಏನನ್ನೂ ಹೇಳ ದಿದ್ದರೂ ನಿರ್ಧಾರ ತೆಗೆದು ಕೊಳ್ಳಲು ಸಿಎಂ ಸ್ವತಂತ್ರರು ಎಂದಿದ್ದಾರೆ. ಮೂಲಗಳ ಪ್ರಕಾರ ಶಿವಸೇನೆ ಕೂಡ ಅನಿಲ್ ದೇಶ್‌ಮುಖ್ ಅವರ ರಾಜೀನಾಮೆಯ ಬಗ್ಗೆ ಒಲವು ತೋರಿದೆ. ಸರಕಾರಕ್ಕೆ ಬಿದ್ದಿರುವ ಏಟುಗಳಿಂದ ಪಾರಾಗಬೇಕು ಎಂದಾದರೆ ದೇಶ್‌ಮುಖ್ ರಾಜೀನಾಮೆ ನೀಡುವುದು ಸೂಕ್ತ ಎಂಬುದು ಶಿವಸೇನೆಯ ವಾದ. ದೇಶ್‌ಮುಖ್ ರಾಜೀನಾಮೆ ನೀಡಿದರೆ ಅಜಿತ್ ಪವಾರ್ ಅಥವಾ ರಾಜೇಶ್ ಟೋಪೆ ಗೃಹ ಸಚಿವರಾಗುವ ಸಾಧ್ಯತೆ ಇದೆ.
ಬಿಜೆಪಿ ಬಿಗಿಪಟ್ಟು :
ಪರಂಬೀರ್ ಸಿಂಗ್ ಅವರ ಸ್ಫೋಟಕ “ವಸೂಲಿ’ ಹೇಳಿಕೆ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ತೀವ್ರ ಚಟುವಟಿಕೆ ಗಳು ನಡೆದಿವೆ. ಅನಿಲ್ ದೇಶ್‌ಮುಖ್ ರಾಜೀನಾಮೆಗಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಶನಿವಾರ ರಾತ್ರಿಯೇ ಒತ್ತಾಯಿಸಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.