ಆಳಂದ: ಅಧಿಕಾರ ಅವಧಿ ಎರಡ್ಮೂರು ವರ್ಷವಾದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಲೇ ಆಗುತ್ತಿಲ್ಲ. ಇರುವ ಯೋಜನೆಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಯಿಂದ ಆದ ಖರ್ಚು ವೆಚ್ಚದ ವಿವರಣೆಯನ್ನೂ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಜನರಿಗೆ ನಾವೇನು ಉತ್ತರಿಸಬೇಕು ಎಂದು ತಾಪಂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಹರಿಹಾಯ್ದ ಪ್ರಸಂಗ ನಡೆಯಿತು.
ಪಟ್ಟಣದ ತಾಪಂ ಕಚೇರಿಯಲ್ಲಿ ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬಹುತೇಕ ಸದಸ್ಯರು ಆಡಳಿತ ಅವ್ಯವಸ್ಥೆ ಸರಿಪಡಿಸಿ ಇಲಾಖೆಗಳ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕಾಮಗಾರಿಗಳ ಕುರಿತು ಜಿಪಂ ಎಇಇ ಮಲ್ಲಿಕಾರ್ಜುನ ಕಾರಬಾರ ಮತ್ತು ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿ ಕುರಿತು ಗ್ರಾಮೀಣ ನೀರು ಸರಬರಾಜು ಎಇಇ ಸಂಗಮೇಶ ಬಿರಾದಾರ ವರದಿ ಮಂಡಿಸಿದರು.
ಸಿಡಿಪಿಓ ಶ್ರೀಕಾಂತ ಮೇಂಗಜಿ ಅವರ ವರದಿಗೆ ಕುಪಿತರಾದ ಸದಸ್ಯ ಶಿವಪ್ಪ ವಾರಿಕ, ಅಂಗನವಾಡಿಗಳಿಗೆ ರಾತ್ರಿ ಹೊತ್ತಿನಲ್ಲೇಕೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ರುದ್ರವಾಡಿ ಸದಸ್ಯೆ ಸುಜಾತ ಎಸ್. ಖೋಭ್ರೆ, ಸಂಗೀತಾ ರಾಠೊಡ ಅವರು ಅಧಿಕಾರಿಗಳು ಯಾವ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡುತ್ತಿಲ್ಲ. ಸಮರ್ಪಕವಾಗಿ ಲಿಖೀತ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಒದಗಿಸಬೇಕು ಎಂದಾಗ ಕೊಡುವುದಾಗಿ ಅಧಿಕಾರಿ ಒಪ್ಪಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಅವರು ವರದಿಗೆ ಪ್ರತಿಕ್ರಿಯಿಸಿದ ನಿಂಬಾಳ ಸದಸ್ಯ ಬಸವರಾಜ ಸಾಣಕ, ದತ್ತಾತ್ರೆಯ ದುರ್ಗದ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯ 1.50 ಲಕ್ಷ ರೂ. ಮೊತ್ತದ ಪೀಠೊಪಕರಣ ಸಾಮಗ್ರಿಗಳೇ ನಾಪತ್ತೆಯಾಗಿವೆ. ಸಂಬಂಧಿತರ ಮೇಲೆ ಕ್ರಮ ತೆಗೆದುಕೊಳ್ಳಲು ಶಿಕ್ಷಣಾಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದಾಗ ಮಧ್ಯ ಪ್ರವೇಶಿಸಿದ ಇಒ ಅನಿತಾ ಕೊಂಡಾಪುರ ಅವರು, ರುದ್ರವಾಡಿ ಹಾಗೂ ನಿಂಬಾಳ ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕು. ಕಳೆದ ಸಾಲಿಗಿಂತ 10ನೇ ಫಲಿತಾಂಶ ಕುಗ್ಗಿದ್ದಕ್ಕೆ ಕಾರಣ ನೀಡಬೇಕು ಎಂದಾಗ ಆಂಗ್ಲ ಮತ್ತು ಗಣಿತ ಶಿಕ್ಷಕರ ಕೊರತೆಯಿಂದ ಫಲಿತಾಂಶ ಇಳಿಕೆ ಕಂಡಿದೆ ಎಂದಾಗ ನೆಪ ಹೇಳದೇ ಮುಂದಿನ ಬಾರಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಇಒ ಸೂಚಿಸಿದರು.
ಸಮಾಜಿಕ ವಲಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ ಇಒ ಅವರು ಕಳೆದ ಹಾಗೂ ಪ್ರಸಕ್ತ ಸಾಲಿನ ಪ್ರಗತಿಯ ಸಮಪರ್ಕವಾದ ಅಂಕಿ ಅಂಶಗಳ ವರದಿಯನ್ನು ಖುದ್ದಾಗಿ ನೀಡಬೇಕು ಎಂದು ತಾಕೀತು ಮಾಡಿದರು.
ರೇಷನ್ ಕಾರ್ಡ್ ಇಲ್ಲ: ರೇಷನ್ ಕಾರ್ಡ್‌ಗೆ ಬಡವರು ಅರ್ಜಿ ಸಲ್ಲಿಸಿ ವರ್ಷವಾದರು ಕಾರ್ಡ್ ಏಕೆ ನೀಡುತ್ತಿಲ್ಲ ಎಂದು ಆಹಾರ ನಾಗರಿಕ ಇಲಾಖೆ ಅಧಿಕಾರಿ ಪ್ರವೀಣಗೆ ಸದಸ್ಯರು ಪ್ರಶ್ನಿಸಿದಾಗ ಹಂತ, ಹಂತವಾಗಿ ನೀಡಲಾಗುತ್ತಿದೆ ಎಂದು ಸಬೂಬ ಹೇಳಿಕೊಂಡಾಗ ಸದಸ್ಯರು ಸಿಡಿಮಿಡಿಗೊಂಡರು.
ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಇಲಾಖೆ ಯೋಜನೆಗಳ ಮಾಹಿತಿ ಒದಗಿಸಿದರು.
ತಾಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಸದಸ್ಯ ಪ್ರಭು ಸರಸಂಬಿ, ಸದಸ್ಯೆ ಮಹಾದೇವಿ ಚಿ. ಘಂಟೆ, ರುಕ್ಮೀಣಿ ಗಾಯಕವಾಡ, ಅಹಿಲ್ಯಾಬಾಯಿ ಕೊನಕ್, ಪಾರ್ವತಿ ಎಸ್. ಮಹಾಗಾಂವಕರ, ದೀಪಕ್ಕ ಖೇಡ್ಲ, ಚಾಂದಸಾಬ ಮುಲ್ಲಾ ಮತ್ತಿತರ ಸದಸ್ಯರು ಯೋಜನೆ ಹಾಗೂ ಅನುದಾನ ಇಲಾಖೆ ಮಾಹಿತಿ ದೊರೆಯದಕ್ಕೆ ಬೇಸರ ವ್ಯಕ್ತಪಡಿಸಿದರು.