ಇಸ್ಲಾಮಾಬಾದ್: ಉದ್ರಿಕ್ತ ಮುಸ್ಲಿಂ ಗುಂಪೊಂದು ಪುರಾತನ ಗಣೇಶ ದೇವಾಲಯದ ಒಳಗೆ ನುಗ್ಗಿ ಮೂರ್ತಿಗಳನ್ನು ಜಖಂಗೊಳಿಸಿ, ದಾಂಧಲೆ ನಡೆಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬುಧವಾರ (ಆಗಸ್ಟ್ 04) ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಲಾಹೋರ್ ನಿಂದ 590 ಕಿಲೋ ಮೀಟರ್ ದೂರದಲ್ಲಿರುವ ರಹೀಂ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದಲ್ಲಿರುವ ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಗುಂಪೊಂದು ಈ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Flood:ಗ್ರಾಮಸ್ಥರನ್ನು ರಕ್ಷಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಸಚಿವ,ಹೆಲಿಕಾಪ್ಟರ್ ಮೂಲಕ ರಕ್ಷಣೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕರ ಗುಂಪೊಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಪಟ್ಟಣದಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿರುವುದು ದಾಖಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಹಿಂದೂ ದೇವಾಲಯದ ಒಳಗೆ ನುಗ್ಗಿದ ಮುಸ್ಲಿಮರ ಗುಂಪು ಕಿಟಕಿ ಗಾಜುಗಳನ್ನು ಪುಡಿ, ಪುಡಿ ಮಾಡಿ, ವಿಗ್ರಹದ ಮೇಲೆ ಕಲ್ಲು ತೂರಾಟ ನಡೆಸಿ, ಕೈಗೆ ಸಿಕ್ಕಿದ್ದನ್ನು ನಾಶಗೊಳಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ ವಾರ ಎಂಟು ವರ್ಷದ ಬಾಲಕನೊಬ್ಬ ಪ್ರಾರ್ಥನಾ ಸ್ಥಳದ ಬಳಿ ಮೂತ್ರ ಮಾಡಿರುವುದಾಗಿ ಆರೋಪಿಸಿದ ಪರಿಣಾಮ ಭೋಗ್ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದ ಹಿಂದೂ, ಮುಸ್ಲಿಂ ಸಮುದಾಯದ ನಡುವೆ ಘರ್ಷಣೆ ಏರ್ಪಟ್ಟಿತ್ತು ಎಂದು ವರದಿ ಹೇಳಿದೆ.
ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರಿಕ್ ಎ ಇನ್ಸಾಪ್ ಪಕ್ಷದ ಸಂಸದ ಡಾ.ರಮೇಶ್ ಕುಮಾರ್ ವಂಕ್ವಾನಿ ಅವರು, ಹಿಂದೂ ದೇವಾಲಯದ ಮೇಲಿನ ದಾಳಿಯ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಕೂಡಲೇ ಘಟನೆ ಸ್ಥಳಕ್ಕೆ ಪೊಲೀಸರು ತೆರಳಿ, ಧ್ವಂಸಗೊಳಿಸುವುದನ್ನು ಮತ್ತು ಬೆಂಕಿಹಚ್ಚುವುದನ್ನು ತಡೆಯುವಂತೆ ಪೊಲೀಸ್ ಇಲಾಖೆಗೆ ಡಾ.ರಮೇಶ್ ಕುಮಾರ್ ವಂಕ್ವಾನಿ ತಿಳಿಸಿದ್ದರು. ಆದರೆ ಪೊಲೀಸರು ಘಟನೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.