ಕೊಲಂಬೊ: ಸಾಮಾನ್ಯ ದರ್ಜೆಯ ತಂಡವಾದ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಸೋತ ಬೆನ್ನಲ್ಲೇ ಏಂಜೆಲೊ ಮ್ಯಾಥ್ಯೂಸ್ ಶ್ರೀಲಂಕಾ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಈ ಸೋಲು ತನ್ನ ಕ್ರಿಕೆಟ್ ಬಾಳ್ವೆಯಲ್ಲೇ ಎದುರಾದ ದೊಡ್ಡ ಆಘಾತ ಹಾಗೂ ಹಿನ್ನಡೆ ಎಂಬುದಾಗಿ ಅವರು ಹೇಳಿದ್ದಾರೆ.
“ಇದು ನನ್ನ ಕ್ರಿಕೆಟ್ ಬದುಕಿನಲ್ಲಿ ಎದುರಾಗಿರುವ ಭಾರೀ ಹಿನ್ನಡೆ. ಈ ಸರಣಿಯ ವೇಳೆ ಎಲ್ಲವೂ ನಮ್ಮ ವಿರುದ್ಧವಾಗಿ ನಡೆಯಿತು. ಟಾಸ್‌ನಿಂದ ಮೊದಲ್ಗೊಂಡು ಪಿಚ್ ಅನ್ನು ಅಂದಾಜಿಸುವ ವಿಷಯದಲ್ಲಿ ನಾವು ಸಂಪೂರ್ಣವಾಗಿ ಎಡವಿದೆವು. ಇದಕ್ಕೆ ಕ್ಷಮೆ ಇಲ್ಲ. ನಾವು ಜಿಂಬಾಬ್ವೆಯನ್ನು ಮಣಿಸುವ ಮಟ್ಟದಲ್ಲಿಲ್ಲ ಎಂದು ಪ್ರತಿ ಪಂದ್ಯ ಮುಗಿದ ಬಳಿಕ ನಮಗೆ ಅನಿಸುತ್ತಿತ್ತು. ಜಿಂಬಾಬ್ವೆ ಅತ್ಯುತ್ತಮ ಮಟ್ಟದ ಕ್ರಿಕೆಟ್ ಪ್ರದರ್ಶಿಸಿತು…’ ಎಂದು ಮ್ಯಾಥ್ಯೂಸ್ ಹೇಳಿದರು.
“ಐಸಿಸಿ ರ್‍ಯಾಂಕಿಂಗ್‌ನಲ್ಲಿ ಎಂಟ ರಷ್ಟು ಕೆಳ ಕ್ರಮಾಂಕದಲ್ಲಿದ್ದ ನಾವು ಜಿಂಬಾಬ್ವೆಯನ್ನು 5-0 ಅಂತರ ದಿಂದ ಮಣಿಸುವ ಯೋಜನೆ ಹಾಕಿಕೊಂಡಿದ್ದೆವು. ಈ ಮೂಲಕ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸುವುದು ನಮ್ಮ ಗುರಿಯಾಗಿತ್ತು. ಆದರೆ ಇದರಲ್ಲಿ ಪೂರ್ತಿಯಾಗಿ ವಿಫಲರಾದೆವು. ಸದಾ ಒತ್ತಡದಲ್ಲೇ ಆಡಬೇಕಾಯಿತು…’ ಎಂದು ಮ್ಯಾಥ್ಯೂಸ್ ವಿಷಾದಿಸಿದರು.
“ನಾಯಕತ್ವ ಸಾಕು ಎನಿಸುತ್ತಿದೆ. ಆದರೆ ಇನ್ನೂ ಕೆಳಗಿಳಿಯುವ ಬಗ್ಗೆ ನಿರ್ಧರಿಸಿಲ್ಲ. ಆಯ್ಕೆ ಮಂಡಳಿ ಜತೆ ಮಾತನಾಡಿ ಮುಂದಿನ ಹೆಜ್ಜೆ ಇಡಲಿದ್ದೇನೆ. ಇದಕ್ಕೆ ಇನ್ನೂ ಕಾಲಾವಕಾಶ ಇದೆ…’ ಎಂದಿದ್ದಾರೆ ಮ್ಯಾಥ್ಯೂಸ್.
ಸದ್ಯದಲ್ಲೇ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರದ ಕ್ರಿಕೆಟಿಗೆ ಎದು ರಾದ ಭಾರೀ ಹೊಡೆತ ಇದಾಗಿದೆ. ಜಿಂಬಾಬ್ವೆಯಂಥ ಸಾಮಾನ್ಯ ಮಟ್ಟದ ತಂಡದ ವಿರುದ್ಧ ತವರಿ ನಲ್ಲೇ ಎದುರಾದ ಸೋಲನ್ನು ಅರಗಿ ಸಿಕೊಳ್ಳಲು ಸಾಧ್ಯವಾಗದ ಲಂಕಾ ಪಡೆ ಬಲಿಷ್ಠ ಭಾರತದ ವಿರುದ್ಧ ಎಂಥ ಪ್ರದರ್ಶನ ನೀಡೀತು ಎಂಬ ಆತಂಕ ಇಲ್ಲಿನ ಅಭಿಮಾನಿಗಳನ್ನು ಕಾಡುತ್ತಿದೆ.