ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು ಆಧಾರರಹಿತವಾಗಿ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಮೂಲ. ಅಧಿಕಾರ ಇರುವಾಗ ಭ್ರಷ್ಟರನ್ನು ಪೋಷಿಸುತ್ತ ಬಂದಿದ್ದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಭ್ರಷ್ಟಾಚಾರ ಮತ್ತು ಸಿದ್ದರಾಮಯ್ಯ ಅವರ ಅಹಂಕಾರದ ವರ್ತನೆಯಿಂದಾಗಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಜನತೆ ತಿರಸ್ಕರಿಸಿದ್ದಾರೆ. ಬೇಜವಾಬ್ದಾರಿ ವರ್ತನೆಯ ಸಿದ್ದರಾಮಯ್ಯ ಅವರ ಮಾತಿಗೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಬೆಲೆ ಇಲ್ಲ. ಭ್ರಷ್ಟಾಚಾರದ ವಿರುದ್ಧ ಈಗ ಭಾರೀ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.