ಧಾರವಾಡ: ಮಾತೃಪೂರ್ಣ ಯೋಜನೆ ಜಾರಿಗೊಳಿಸಲು ಮೂಲಸೌಕರ್ಯ ಒದಗಿಸುವಂತೆ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೊಳಿಸಿ ಎರಡು ತಿಂಗಳು ಕಳೆದರೂ ಜಾರಿಗೂ ಪೂರ್ವದಲ್ಲಿ ನೀಡಬೇಕಿದ್ದ ಮೂಲಸೌಕರ್ಯಗಳನ್ನು ನೀಡಿಲ್ಲ. ಜೊತೆಗೆ ಕಾರ್ಯಕರ್ತೆಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ ನೀಡುವುದು ಸರಿಯಲ್ಲ. ಬಹುತೇಕ ನಗರ ಹಾಗೂ ಗ್ರಾಮೀಣ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.
ಇದಕ್ಕೆ ಸರ್ಕಾರ ನಿಗದಿಪಡಿಸಿದ 3000 ರೂ. ಬಾಡಿಗೆ ಸಾಲದು. ಯೋಜನೆಗೆ ಸುಸಜ್ಜಿತ ಕಟ್ಟಡ, ಅಡುಗೆ ತಯಾರಿಸಲು ಪಾತ್ರೆ, ಕುಕ್ಕರ್, ಗ್ಯಾಸ್ ಸ್ಟೋವ್, ಸಿಲಿಂಡರ್, ನೀರು ಸಂಗ್ರಹಿಸುವ ಬ್ಯಾರಲ್ ಇತ್ಯಾದಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ಗರ್ಭಿಣಿ-ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ವ್ಯವಸ್ಥೆ ಇದ್ದು, ಮೊಟ್ಟೆ ಖರೀದಿಗೆ ಕಾರ್ಯಕರ್ತೆಯರಿಗೆ ಮುಂಗಡ ಹಣ ನೀಡದೆ, ಖರೀದಿಯ ನಂತರ ಹಣ ನೀಡಿದರೆ ಕಾರ್ಯಕರ್ತೆಯರು ದಿನವೂ ಹಣ ಎಲ್ಲಿಂದ ಹೊಂದಿಸಬೇಕು? ಆದ್ದರಿಂದ ಮೊಟ್ಟೆಗೆ 7 ರೂ.ಗಳಂತೆ ಮುಂಗಡ ಹಣ ಹಾಕುವಂತೆ ಒತ್ತಾಯಿಸಿದರು.
ಫೆಡರೇಶನ್ ಜಿಲ್ಲಾಧ್ಯಕ್ಷ ನೂರಜಾನ್ ಸಮುದ್ರಿ ಮಾತನಾಡಿ, ಗ್ಯಾಸ್ ಲಿಂಡರ್ ಗೆ ಹಳೆಯ ದರ 500 ರೂ. ನೀಡುತ್ತಿದೆ. ಈಗ ಗ್ಯಾಸ್ ಬೆಲೆ 800 ರೂ. ಆಗಿದೆ. ವರ್ಷಕ್ಕೆ ನಾಲ್ಕು ಸಿಲಿಂಡರ್ ಬದಲು ಎಂಟು ಸಿಲಿಂಡರ್ ಹೆಚ್ಚಿಸಬೇಕು. ಮೊಟ್ಟೆ ಬೆಲೆ 5 ರೂ. ನೀಡುತ್ತಿತ್ತು. ಈಗ ಏಳು ರೂಪಾಯಿಗೆ ಏರಿದೆ. ಇದೆಲ್ಲ ಕಾರ್ಯಕರ್ತೆಯರಿಗೆ ಹೊರೆಯಾಗಲಿದೆ.
ತರಕಾರಿ ಕೊಳ್ಳುವಲ್ಲಿಯೂ ಸಮಸ್ಯೆ ಆಗಿದೆ ಎಂದರು. ಒಂದು ಕೇಂದ್ರದಲ್ಲಿ 15-20 ಜನ ಫಲಾನುಭವಿ ಯೋಜನೆಗೆ ಒಳಪಡುತ್ತಾರೆ. ಓರ್ವರಿಗೆ 21 ರೂ. ನಿಗದಿಪಡಿಸಿದೆ. ಒಬ್ಬರಿಗೆ ರೂ.2ರಂತೆ ತರಕಾರಿ ಖರೀದಿಸಬೇಕು. ಇದರಲ್ಲಿ ಏನು ತರಲು ಸಾಧ್ಯ? ಈ ಸಮಸ್ಯೆ ನಡುವೆ ಹಣಕಾಸಿನ ವ್ಯವಹಾರಕ್ಕೆ ಬಾಲವಿಕಾಸ ಅಕ್ಯಾಡೆಮಿ ಕಮಿಟಿ ಹೆಸರಲ್ಲಿ ಜಂಟಿಖಾತೆ ತೆರೆಯುವುದು ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು.
ಫೆಡರೇಶನ್ ಪದಾಧಿಕಾರಿಗಳಾದ ವೀರಮ್ಮ ತುರಕಾಣಿ, ಎನ್.ಎ.ಖಾಜಿ, ಲತಿಪಾ ಬಾಗಲಕೋಟಿ, ಅಕ್ಕಮ್ಮ ಬಡ್ನಿ, ಸಾವಕ್ಕ ಕಮ್ಮಾರ, ಸಾವಿತ್ರಿ ಜೀವನಗೌಡ್ರ, ಎಸ್. ಹಾರೋಗೇರಿ, ಚನ್ನಕ್ಕ ಅಂಗಡಿ, ಐ.ಡಿ. ಸುಂಕದ, ಶಿವಗಂಗಾ ಹೆಬ್ಬಳ್ಳಿ, ಶಂಕ್ರಮ್ಮ ಹಿರೇಮಠ, ಗಿರಿಜಾ ಬಡಿಗೇರ, ನಿರ್ಮಲಾ ಕಲಕರ್ಣಿ ಇತರರಿದ್ದರು.