ಔರಾದ: ಲಾಧಾ ಗ್ರಾಪಂ ವ್ಯಾಪ್ತಿಯ ಮುಸ್ತಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಒಡೆದು ಮೂರು ವರ್ಷ ಕಳೆದರೂ, ಸಬ್ಬಂಧ ಪಟ್ಟ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿರುವುದರಿಂದ ಮಳೆ ಬಂದಾಗಲೆಲ್ಲ ಮಕ್ಕಳು ನೆನೆಯುತ್ತಿದ್ದಾರೆ.
ಅಂಗನವಾಡಿ ಕಟ್ಟಡ ಹಳೆಯದಾಗಿದ್ದು, ಮೇಲ್ಛಾವಣಿಯ ಸಿಮೆಂಟ್ ತಗಡಗಳು ಒಡೆದಿರುವುದರಿಂದ ಸೋರುತ್ತಿದೆ. ಇದರಿಂದ ಅಂಗನವಾಡಿ ಮಕ್ಕಳ ಪೌಷ್ಟಿಕಾಂಶ ಆಹಾರ ಪದಾರ್ಥ ಹಾಗೂ ಅಗತ್ಯ ಸಾಮಗ್ರಿಗಳು ನೆನೆದು ಹಾಳಾಗುತ್ತಿವೆ. ಕಟ್ಟಡದ ಸ್ಥಿತಿಗತಿ ಕುರಿತು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರ, ಗ್ರಾಪಂ ಸದಸ್ಯರಿಗೂ ತಿಳಿಸಿ ದುರಸ್ತಿಗೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಂಗನವಾಡಿ ಶಿಕ್ಷಕಿ ಹಾಗೂ ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
ಕಟ್ಟಡ ಹಳೆಯದಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಯಾವಾಗ ಬಿದ್ದು ಮಕ್ಕಳನ್ನು ಬಲಿ ಪಡೆಯುತ್ತದೊ ಎನ್ನುವ ಆಂತಕ ಮಕ್ಕಳ ಪಾಲಕರಿಗೆ ಕಾಡುತ್ತಿದೆ.
ಸ್ವತ್ಛತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಪರಿವರ್ತನೆ ಮಾಡಿ, ಸ್ವತ್ಛತೆ ಕಾಪಾಡುವಂತೆ ತಿಳಿಸುತ್ತಿವೆ. ಆದರೆ ಚಿಕ್ಕ ಮಕ್ಕಳು ಇರುವ ಅಂಗನವಾಡಿ ಕೇಂದ್ರದ ಸುತ್ತ ಮಲಿನ ನೀರು ಮತ್ತು ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾಗಿ ಪರಿಸರ ಹಾಳಾಗಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳು ಸಾಂಕ್ರಾಮಿಕ ರೋಗ ತಗುಲುವ ಆಂತಕ ಶುರುವಾಗಿದೆ.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಂಗನವಾಡಿ ಶಿಕ್ಷಕರಿಗೆ ನೀತಿ ಪಾಠ ಹೇಳುವುದರ ಜೊತೆಗೆ ಅಂಗನವಾಡಿ ಕಟ್ಟಡ ವೀಕ್ಷಿಸಲು ಮುಂದಾಗಬೇಕು. ಆಗ ಮಾತ್ರ ಅಂಗನವಾಡಿಗಳು ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಧನರಾಜ ಮುಸ್ತಾಪುರ ಆಗ್ರಹಿಸಿದ್ದಾರೆ.