Advertisement

10ಕ್ಕೆ ಜಿಲ್ಲಾದ್ಯಂತ ಅಂಗನವಾಡಿ ನೌಕರರ ಮುಷ್ಕರ

02:43 PM Dec 06, 2019 | Team Udayavani |

ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಹಾಗೂ ನೌಕರರ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸಿಐಟಿಯು ನೇತೃತ್ವದಲ್ಲಿ ಡಿ.10ರಿಂದ ಅನಿರ್ದಿಷ್ಟ ಮುಷ್ಕರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾದ್ಯಕ್ಷೆ ಗಂಜಿಗುಂಟೆ ಲಕ್ಷ್ಮೀದೇವಮ್ಮ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ನಿಟ್ಟಿನಲ್ಲಿ ನೌಕರರ ಸಂಘ, ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಒತ್ತಾಯಿಸಿ, ರಾಜ್ಯದ 30 ಜಿಲ್ಲೆಗಳನ್ನೊಳಗೊಂಡ 6 ರಾಜ್ಯ ಮಟ್ಟದ ಅಂಗನವಾಡಿ ನೌಕರರ ಜಾಥಾ ನಡೆಸಲಾಗುತ್ತಿದೆ ಎಂದರು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಹಾಗೂ ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಕೂಡಲೇ ರಾಜ್ಯ ಸರ್ಕಾರ, ನೌಕರರ ಬೇಡಿಕೆ ಈಡೇರಿಸಿ ತಕ್ಷಣ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದನ್ನು ನಿಲ್ಲಿಸಿ, ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕೆಂದು ಆಗ್ರಹಿಸಿದರು.

ಅಂಗನವಾಡಿ ನೌಕರರು ಕನಿಷ್ಠ ಗೌರವ ಧನ ಪಡೆದು ಸಮಾಜ ಬದಲಾವಣೆ ಬಯಸುತ್ತಿದೆ. ಆದರೆ, ಅಂಗನವಾಡಿ ಕೇಂದ್ರಗಳು ಮಾತ್ರ ಹಳೆ ರೀತಿಯಲ್ಲೇ ಮುಂದುವರಿದಿವೆ. ಮೂರುವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿರುವುದರಿಂದ ಅಂಗನವಾಡಿ ಕೇಂದ್ರಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರ ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯರನ್ನು ಕೊಡ ಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್‌ ಎಕೆಜಿ, ಯುಕೆಜಿ ಆರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಐಸಿಡಿಎಸ್‌ನ 6 ಉದ್ದೇಶಗಳಿಗೆ ಬಿಟ್ಟು ಉಳಿದ ಕೆಲಸಗಳನ್ನು ಅಂಗನವಾಡಿ ನೌಕರರಿಂದ ಮಾಡಿಸಬಾರದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳಲ್ಲಿ ಈಗ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿಗೆ ವರ್ಗಾಯಿಸ  ಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. ಖಾಲಿ ಇರುವ ಹುದ್ದೆ ತುಂಬಬೇಕು. ಸೇವಾ ನಿಯಮಾವಳಿ ರಚಿಸಬೇಕು ಎಂದು ಒತ್ತಾಯಿಸಿದರು.

Advertisement

ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ, ತಾಲೂಕು ಅಧ್ಯಕ್ಷೆ ಸುಜಾತಾ, ಕಾರ್ಯದರ್ಶಿ ಮುನಿರತ್ನ, ಗೌರಿಬಿದನೂರು ತಾಲೂಕು ಅಧ್ಯಕ್ಷೆ ಪದ್ಮಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next